ಹಾಸನ: ಕೋವಿಡ್ 19 ನಿಯಂತ್ರಣ ಕ್ರಮವಾಗಿ ಲಾಕ್‌ಡೌನ್ ಜಾರಿ ಯಲ್ಲಿದ್ದ ಅವಧಿಯಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ಧನ ಸೇರಿದಂತೆ ಸರ್ಕಾರದ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಅವರಿಗೆ ಸೂಚಿಸಿದರು. ಮಳೆಗಾಲದಲ್ಲಿ ಜಾನುವಾರು ಗಳಿಗೆ ಸಂಭವಿಸಬಹುದಾದ ರೋಗ ರುಜಿನಗಳನ್ನು ತಡೆಗಟ್ಟಲು ಲಸಿಕೆ ಗಳನ್ನು ನೀಡಬೇಕು ಎಂದು ಪಶು ಪಾಲನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅತಿವೃಷ್ಟಿ ಹಾನಿ ಪರಿಹಾರ ಕಾಮಗಾರಿ ಗಳನ್ನು ತುರ್ತಾಗಿ ಪೂರ್ಣಗೊಳಿಸ ಬೇಕು ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿ ಕಾರಿ ಡಾ.ನವೀನ್ ಭಟ್, ಗಿರೀಶ್ ನಂದನ್ ಸಭೆಯಲ್ಲಿ ಹಾಜರಿದ್ದರು.
ಯಾವ ಬೆಳೆಗಳಿಗೆ ಪರಿಹಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣ್ಣು ಮತ್ತು ತರಕಾರಿ ಬೆಳೆ ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿರುವ ಕೃಷಿಕರಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 15 ಸಾವಿರ ರೂ. ಕನಿಷ್ಠ 2ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಮಾರ್ಚ್ ಕೊನೆಯ ವಾರದಿಂದ ಏಪ್ರಿಲ್ ಕೊನೆಯ ವಾರದ ಅವಧಿಯಲ್ಲಿ ಕೊಯ್ಲಿಗೆ ಬಂದಿದ್ದ ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ ಮತ್ತು ತರಕಾರಿ ಬೆಳೆಗಳಾದ ಟೊಮೆಟೋ, ಹಸಿಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಕುಂಬಳ, ಬೂದುಕಂಬಳ, ಕ್ಯಾರೆಟ್, ಈರುಳ್ಳಿ, ಕ್ಯಾಪ್ಸಿಕಮ್ ಬೆಳೆಗಳನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸ ಲಾಗುತ್ತದೆ.
ಕಲ್ಲಂಗಡಿ ಮತ್ತು ಕರಬೂಜ ಬೇಸಿಗೆ ಬೆಳೆಯಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ನಮೂದಾಗದ ಪಕ್ಷದಲ್ಲಿ ರೈತರು ಅರ್ಜಿ ನೀಡಬೇಕು. ಬಾಳೆ ಹಾಗೂ ಈರುಳ್ಳಿ ಬೆಳೆಗಳಿಗೆ ಸಂಬಂಧಿಸಿದಂತೆ, ಮಾರ್ಚ್ 2ನೇ ವಾರದ ನಂತರ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರ ನೀಡಲಾಗುವುದು. ಜೂ.10ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನೀಡಿದ ರೈತರ ತಾಕುಗಳನ್ನು ಶೇ. 100ರಷ್ಟು ಸ್ಥಳ ಪರಿಶೀಲಿಸಿ ಮಹಜರ್ ಮಾಡಲಾಗುತ್ತದೆ.