ಪಿರಿಯಾಪಟ್ಟಣ: ಯಶಸ್ವಿಯಾಗಿ ಮೂರು ವರ್ಷ ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿದೆ. ಆದರೆ, ಇವುಗಳನ್ನು ಜನತೆಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತೆರಳಿ ಜನತೆಗೆ ತಿಳಿಸಬೇಕು ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವಿಭಾಗ ಸಂಚಾಲಕ ಡಾ.ನವೀನ್‌ಕುಮಾರ್ ಕರೆ ನೀಡಿದರು.
ಪಟ್ಟಣದ ಲಿಂಗಾಪುರ ಗಿರಿಜನಹಾಡಿಯಲ್ಲಿ ವಿಸ್ತಾರಕರಾಗಿ ಅವರು ಆಗಮಿಸಿ ಹಾಡಿಯ ಮನೆಮನೆ ಭೇಟಿ ನೀಡಿ ಗಿರಿಜನೊಂದಿಗೆ ಮಾತನಾಡಿದರು. ಆರೋಗ್ಯ, ಕೃಷಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಇವುಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ಜನಪರ ಯೋಜನೆಗಳನ್ನು ಸ್ಥಳೀಯ ಆಡಳಿತ ಯಶಸ್ವಿಯಾಗದಂತೆ ಮಾಡಿದೆ ಎಂದು ದೂರಿದರು.
ಮುದ್ರಾ ಯೋಜನೆಯಡಿ ಯುವಕರಿಗೆ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತಿಲ್ಲ. ಹೀಗೆ ಅನೇಕ ಉತ್ತಮ ಯೋಜನೆಗಳು ಜನತೆಗೆ ತಲುಪದಂತಾಗಿವೆ. ಆದ್ದರಿಂದ ಪ್ರತಿ ಮನೆ ಮನೆಗಳಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಅವುಗಳ ಸದುಪಯೋಗ ಪಡೆಯುವಂತೆ ಅರಿವು ಮೂಡಿಸಬೇಕು. ಈ ಮೂಲಕ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಜೆ.ರವಿ ಮಾತನಾಡಿ, ತಾಲೂಕಿನಾದ್ಯಂತ ಹಲವರು ವಿಸ್ತಾರಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನತೆಗೆ ತಲುಪುವಂತೆ ಮಾಡುವ ಕಾರ್ಯವನ್ನು ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಘೂ ಕಾರ್ಯಕರ್ತರ ಜೊತೆಗೂಡಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವೈದ್ಯಕೀಯ ಪ್ರಕೋಷ್ಠದ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಪ್ರಕಾಶ್‌ಬಾಬುರಾವ್ ಮಾತನಾಡಿ, ಗ್ರಾಮೀಣ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ತರುವಲ್ಲಿ ವೈದ್ಯಕೀಯ ಪ್ರಕೋಷ್ಠ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣದ ಲಿಂಗಾಪುರಹಾಡಿ, ಹಳೆಕೆರೆ ವರ್ತಿಹಾಡಿ ಮತ್ತು ಕೋಗಿಲವಾಡಿ ಗ್ರಾಮಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಜೆ.ಸ್ವಾಮಿ, ಮುಖಂಡರಾದ ನಾಗಾರಾಜು ಇತರರು ಉಪಸ್ಥಿತರಿದ್ದರು.