ನವ ದೆಹಲಿ: ವಕ್ಫ್ ಬೋರ್ಡ್ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಇದನ್ನೂ ಓದಿ : ‘ಕೈ’ ಬಿಕ್ಕಟ್ಟು: ಗೆಹ್ಲೋಟ್- ಪೈಲಟ್ ಬಣಗಳ ನಡುವೆ ಕಮಲ್ ನಾಥ್ ಮಧ್ಯಸ್ಥಿಕೆ
ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಈ ಆದೇಶವನ್ನು ನೀಡಿದ್ದು, ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು. ಇದಕ್ಕೂ ಮೊದಲು, ಸೆಪ್ಟೆಂಬರ್ 21 ರಂದು ನ್ಯಾಯಾಲಯವು ಖಾನ್ ಅವರ ಕಸ್ಟಡಿ ವಿಚಾರಣೆಯನ್ನು ಐದು ದಿನಗಳವರೆಗೆ ವಿಸ್ತರಿಸಿತ್ತು.
ಎಸಿಬಿ ಸೆ.16 ರಂದು ಖಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಬಂಧಿಸಿತ್ತು. ಎಫ್‌ಐಆರ್ ಪ್ರಕಾರ, ಖಾನ್ ಅವರು ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡುವಾಗ ಎಲ್ಲಾ ನಿಯಮಗಳು ಮತ್ತು ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 32 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ. ದೆಹಲಿ ವಕ್ಫ್ ಬೋರ್ಡ್‌ನ ಅಂದಿನ ಸಿಇಒ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರು ಮತ್ತು ಅಂತಹ ಅಕ್ರಮ ನೇಮಕಾತಿ ವಿರುದ್ಧ ಮೆಮೊರಾಂಡಮ್ ನೀಡಿದ್ದರು ಎಂದು ಅದು ಹೇಳಿದೆ.
ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ, ಖಾನ್ ಅವರ ಭ್ರಷ್ಟಾಚಾರ ಆರೋಪದ ನಡುವೆ ವಕ್ಫ್ ಮಂಡಳಿಯ ಹಲವಾರು ಆಸ್ತಿಗಳನ್ನು ಅಕ್ರಮವಾಗಿ ಬಾಡಿಗೆಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ದೆಹಲಿ ಸರ್ಕಾರದಿಂದ ಸಹಾಯಧನವನ್ನು ಒಳಗೊಂಡಿರುವ ವಕ್ಫ್ ಮಂಡಳಿಯ ಹಣವನ್ನು ಖಾನ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಎಫ್‌ಐಆರ್ ನಲ್ಲಿ ದಾಖಲಾಗಿದೆ.