Advertisement
ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯ ಗೆಲ್ಲುವ ಮೂಲಕ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದು ಭಾರತದ ಸತತ 9ನೇ ಸರಣಿ ಗೆಲುವು ಆಗಿದೆ. ಈ ಹಿಂದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಮಾತ್ರ ಸತತ 9 ಸರಣಿ ಗೆದ್ದ ಸಾಧನೆ ಮಾಡಿದೆ.
Related Articles
ಸ್ನಾಯು ಸೆಳೆತದ ನೋವು ಇದ್ದರೂ ತಾಳ್ಮೆಯ ಆಟವಾಡಿದ ಧನಂಜಯ ಟೆಸ್ಟ್‌ನಲ್ಲಿ ಮೂರನೇ ಶತಕ ದಾಖಲಿಸಿದರಲ್ಲದೇ 119 ರನ್ ಗಳಿಸಿ ನಿವೃತ್ತಿಯಾದರು. ಈ ನಡುವೆ ಟೆಸ್ಟ್‌ಗೆ ಪಾದಾರ್ಪಣೆಗೈದ ರೋಶನ್ ಸಿಲ್ವ ಅವರಿಗೆ ಉತ್ತಮ ಬ್ಯಾಟಿಂಗ್ ನಡೆಸುವಂತೆ ಸ್ಫೂರ್ತಿ ತುಂಬಿದರು. ರೋಶನ್ ಮತ್ತು ಡಿಕ್ವೆಲ್ಲ ಅವರು ಅಂತಿಮ ಅವಧಿಯ ಆಟದಲ್ಲಿ ಅಮೋಘವಾಗಿ ಆಡಿ ಪಂದ್ಯವನ್ನು ಡ್ರಾಗೊಳಿಸಲು ಯಶಸ್ವಿಯಾದರು. ಭಾರತೀಯ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಧನಂಜಯ 219 ಎಸೆತ ಎದುರಿಸಿ 119 ರನ್ ಗಳಿಸಿ ನಿವೃತ್ತಿಯಾದರು. 15 ಬೌಂಡರಿ ಬಾರಿಸಿದ ಅವರು ಅಶ್ವಿನ್ ಎಸೆತವೊಂದನ್ನು ಸಿಕ್ಸರ್‌ಗೆ ತಳ್ಳಿದ್ದರು.
Advertisement
ರೋಶನ್ ಮತ್ತು ಡಿಕ್ವೆಲ್ಲ ಮುರಿಯದ ಆರನೇ ವಿಕೆಟಿಗೆ 94 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತಕ್ಕೆ ತಲೆನೋವುಂಟು ಮಾಡಿದರು. ಅಂತಿಮ ಅವಧಿಯ ಆಟದಲ್ಲಿ ಭಾರತಕ್ಕೆ ಯಾವುದೇ ವಿಕೆಟ್ ಲಭಿಸಿಲ್ಲ. ವೃದ್ಧಿಮಾನ್ ಸಾಹಾ ಅವರು ಅಂತಿಮ ಅವಧಿಯ ಆಟದಲ್ಲಿ ಡಿಕ್ವೆಲ್ಲ ಅವರನ್ನು ಸುಲಭ ಸ್ಟಂಪಿಂಗ್ ಅವಕಾಶ ಕೈಚೆಲ್ಲುವುದರೊಂದಿಗೆ ಪಂದ್ಯ ಡ್ರಾದತ್ತ ವಾಲಿತು. ರೋಶನ್ 154 ಎಸೆತ ಎದುರಿಸಿ 74 ಮತ್ತು ಡಿಕ್ವೆಲ್ಲ 44 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಮ್ಯಾಥ್ಯೂಸ್ ಅವರನ್ನು ಬೇಗನೇ ಕಳೆದುಕೊಂಡಾಗ ಶ್ರೀಲಂಕಾಕ್ಕೆ ಆಘಾತವಾಗಿತ್ತು. ಆದರೆ ಧನಂಜಯ ಡಿ’ಸಿಲ್ವ ಮತ್ತು ದಿನೇಶ್ ಚಂಡಿಮಾಲ್ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರಿಬ್ಬರು ಐದನೇ ವಿಕೆಟಿಗೆ 112 ರನ್ನುಗಳ ಜತೆಯಾಟ ನಡೆಸಿ ಪಂದ್ಯ ಡ್ರಾಗೊಳ್ಳಲು ಪ್ರಯತ್ನಿಸಿದರು. ಉತ್ತಮವಾಗಿ ಆಡುತ್ತಿದ್ದ ಚಂಡಿಮಾಲ್ 36 ರನ್ ಗಳಿಸಿದ ವೇಳೆ ಅಶ್ವಿನ್‌ಗೆ ಬಲಿಯಾದರು.
ಕೋಟ್ಲಾ ಪಿಚ್ ಭಾರತೀಯ ಸ್ಪಿನ್ನರ್‌ಗಳಿಗೆ ಅಷ್ಟೊಂದು ನೆರವು ನೀಡಲಿಲ್ಲ. ಅಂತಿಮ ದಿನ ಭಾರತೀಯ ಬೌಲರ್‌ಗಳು ಕೇವಲ ಎರಡು ವಿಕೆಟನ್ನು ಪಡೆಯಲು ಶಕ್ತರಾಗಿದ್ದರು. ಅಶ್ವಿನ್ ಕೇವಲ ಒಂದು ವಿಕೆಟ್ ಪಡೆದರೆ ರವೀಂದ್ರ ಜಡೇಜ 81 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು.
ಸ್ಕೋರುಪಟ್ಟಿಭಾರತ ಪ್ರಥಮ ಇನ್ನಿಂಗ್ಸ್ 7 ವಿಕೆಟಿಗೆ 536 ಡಿಕ್ಲೇರ್x
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 373
ಭಾರತ ದ್ವಿತೀಯ ಇನ್ನಿಂಗ್ಸ್
5 ವಿಕೆಟಿಗೆ 246 ಡಿಕ್ಲೇರ್x
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ (ಗೆಲುವಿಗೆ 410 ರನ್ ಗುರಿ)
ದಿಮುತ್ ಕರುಣರತ್ನೆ ಸಿ ಸಾಹಾ ಬಿ ಜಡೇಜ 13
ಸಮೀರ ಸಮರವಿಕ್ರಮ ಸಿ ರಹಾನೆ ಬಿ ಶಮಿ 5
ಧನಂಜಯ ಡಿ’ಸಿಲ್ವ ಗಾಯಾಳಾಗಿ ನಿವೃತ್ತಿ 119
ಸುರಂಗ ಲಕ್ಮಲ್ ಬಿ ಜಡೇಜ 0
ಏಂಜೆಲೊ ಮ್ಯಾಥ್ಯೂಸ್ ಸಿ ರಹಾನೆ ಬಿ ಜಡೇಜ 1
ದಿನೇಶ್ ಚಂಡಿಮಾಲ್ ಬಿ ಅಶ್ವಿನ್ 36
ರೋಶನ್ ಸಿಲ್ವ ಔಟಾಗದೆ 74
ನಿರೋಶನ್ ಡಿಕ್ವೆಲ್ಲ ಔಟಾಗದೆ 44
ಇತರ: 7
ಒಟ್ಟು (5 ವಿಕೆಟಿಗೆ) 299
ವಿಕೆಟ್ ಪತನ: 1-14, 2-31, 3-31, 4-35, 5-147, 6-205
ಬೌಲಿಂಗ್:
ಇಶಾಂತ್ ಶರ್ಮ 13-2-32-0
ಮೊಹಮ್ಮದ್ ಶಮಿ 15-6-50-1
ಆರ್. ಅಶ್ವಿನ್ 35-3-126-1
ರವೀಂದ್ರ ಜಡೇಜ 38-13-81-3
ಮುರಳಿ ವಿಜಯ್ 1-0-33-0
ವಿರಾಟ್ ಕೊಹ್ಲಿ 1-0-1-0 ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ
ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ ಎಕ್ಸ್‌ಟ್ರಾ ಇನ್ನಿಂಗ್ಸ್
* ವಿರಾಟ್ ಕೊಹ್ಲಿ 2017ರಲ್ಲಿ ಆಡಿದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 2818 ರನ್ ಗಳಿಸಿದ್ದಾರೆ. ಇದು ಕ್ಯಾಲೆಂಡರ್ ವರ್ಷವೊಂದರಲ್ಲ ದಾಖಲಾದ ಮೂರನೇ ಗರಿಷ್ಠ ರನ್ ಆಗಿದೆ. 2014ರಲ್ಲಿ 2868 ರನ್ ಪೇರಿಸಿದ ಕುಮಾರ ಸಂಗಕ್ಕರ ಅಗ್ರಸ್ಥಾನದಲ್ಲಿದ್ದರೆ 2005ರಲ್ಲಿ 2833 ರನ್ ಪೇರಿಸಿದ ರಿಕಿ ಪಾಂಟಿಂಗ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟ್ವೆಂಟಿ20 ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಿದ್ದರಿಂದ ಇದು 2017ರಲ್ಲಿ ಅವರ ಅಂತಿಮ ಪಂದ್ಯವಾಗಿದೆ. * ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 610 ರನ್ ಪೇರಿಸಿದ್ದಾರೆ. ಇದು ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಪರ ಗರಿಷ್ಠ ಮತ್ತು ಸಮಗ್ರವಾಗಿ ನಾಲ್ಕನೇ ಗರಿಷ್ಠ ರನ್ ಆಗಿದೆ. 1990ರಲ್ಲಿ ಭಾರತ ವಿರುದ್ಧ 752 ರನ್ ಪೇರಿಸಿದ ಗ್ರಹಾಂ ಗೂಚ್ ಅವರ ಹೆಸರಲ್ಲಿ ಈ ದಾಖಲೆಯಿದೆ. ಶ್ರೀಲಂಕಾ ವಿರುದ್ಧ ಕೊಹ್ಲಿ ಅವರಿಗಿಂತ ಉತ್ತಮ ರನ್ ಸಾಧನೆಯನ್ನು ಬ್ರ್ಯಾನ್ ಲಾರಾ ಮಾಡಿದ್ದಾರೆ. 2001-02ರಲ್ಲಿ ಲಾರಾ 688 ರನ್ ಹೊಡೆದಿದ್ದರು. * ಐದು ಅಥವಾ ಅದಕ್ಕಿಂತ ಕಡಿಮೆ ಇನ್ನಿಂಗ್ಸ್ ಆಡಿ 600ಕ್ಕಿಂತ ಹೆಚ್ಚಿನ ರನ್ ಅನ್ನು ಮೂವರು ಗಳಿಸಿದ್ದಾರೆ. ಅವರೆಂದರೆ ಕೊಹ್ಲಿ, ಡಾನ್ ಬ್ರಾಡ್‌ಮನ್ (1931-32ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 806) ಮತ್ತು ಮೊಹಮ್ಮದ್ ಯೂಸುಫ್ (2006-07ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 665). 1955-56ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿನೂ ಮಂಕಡ್ 526 ರನ್ ಪೇರಿಸಿದ್ದು ಈ ಹಿಂದಿನ ಆಟಗಾರನೋರ್ವನ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. * ದಿಲ್ಲಿ ಟೆಸ್ಟ್‌ನಲ್ಲಿ ಕೊಹ್ಲಿ 293 ರನ್ (243+50) ಪೇರಿಸಿರುವುದು ಟೆಸ್ಟ್ ಪಂದ್ಯದಲ್ಲಿ ಭಾರತೀಯ ನಾಯಕರೋರ್ವರ ಗರಿಷ್ಠ ಮೊತ್ತವಾಗಿದೆ. ಅವರು ಗಾವಸ್ಕರ್ ಅವರ ದಾಖಲೆಯನ್ನು (289 ರನ್) ಅಳಿಸಿ ಹಾಕಿದರು. ಕೊಹ್ಲಿ ಒಂದೇ ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಅರ್ಧಶತಕ ಸಿಡಿಸಿದ ಏಳನೇ ನಾಯಕ ಆಗಿದ್ದಾರೆ. ಪಾಂಟಿಂಗ್ ಬಳಿಕ ಮೊದಲಿಗ. ಪಾಂಟಿಂಗ್ 2009-10ರಲ್ಲಿ ಹೋಬರ್ಟ್‌ನಲ್ಲಿ ಪಾಕಿಸ್ಥಾನ ವಿರುದ್ಧ ಈ ಸಾಧನೆ (209+89) ಮಾಡಿದ್ದರು. * ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮೂರು ಬಾರಿ 600 ಪ್ಲಸ್ ರನ್ ಪೇರಿಸಿದ್ದಾರೆ. ಇದು ಭಾರತ ಪರ ಹೊಸ ದಾಖಲೆಯಾಗಿದೆ. ಈ ಹಿಂದೆ ಗಾವಸ್ಕರ್ ಮತ್ತು ದ್ರಾವಿಡ್ ತಲಾ ಎರಡು ಬಾರಿ ಈ ದಾಖಲೆ ಮಾಡಿದ್ದರು. ಕೊಹ್ಲಿ ಅವರು 2014-15ರಲ್ಲಿ ಬಾರ್ಡರ್-ಗಾವಸ್ಕರ್ ಸರಣಿಯಲ್ಲಿ 692 ರನ್ ಮತ್ತು ಕಳೆದ ಋತುವಿನಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 655 ರನ್ ಗಳಿಸಿದ್ದರು. ಅಗ್ರಸ್ಥಾನದಲ್ಲಿರುವ ಬ್ರಾಡ್‌ಮನ್ ಆರು ಬಾರಿ 600 ಪ್ಲಸ್ ರನ್ ಪೇರಿಸಿದ್ದಾರೆ. ನೀಲ್ ಹಾರ್ವೆ, ಗ್ಯಾರಿ ಸೋಬರ್ಸ್ ಮತ್ತು ಲಾರಾ ಕೂಡ ಕೊಹ್ಲಿ ಅವರಂತೆ ಮೂರು ಬಾರಿ ಸರಣಿಯೊಂದರಲ್ಲಿ 600 ಪ್ಲಸ್ ರನ್ ಹೊಡೆದಿದ್ದಾರೆ.