ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮಾರ್ಚ್ 16ರ ನಂತರ ಕಳೆದ 24ಗಂಟೆಗಳಲ್ಲಿ ಅತೀ ಕಡಿಮೆ ಪ್ರಮಾಣದ 487 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 45 ಮಂದಿ ಸಾವನ್ನಪ್ಪಿರುವುದಾಗಿ ಗುರುವಾರ(ಜೂನ್ 03) ತಿಳಿಸಿದೆ.
ಇದನ್ನೂ ಓದಿ:ಮಾನವೀಯತೆ ಮೆರೆಯುವ ಸಮಯ, ರಾಜಕೀಯ ಮಾಡುವುದು ಸರಿಯಲ್ಲ ರೇಣುಕಾಚಾರ್ಯ
ಮಾರಣಾಂತಿಕ ಎರಡನೇ ಕೋವಿಡ್ ಅಲೆ ದೇಶಾದ್ಯಂತ ಕ್ಷಿಪ್ರವಾಗಿ ಹರಡಿತ್ತು. ದೆಹಲಿಯಲ್ಲಿ ಏಪ್ರಿಲ್ 19ರಿಂದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಹೆಚ್ಚಳವಾಗತೊಡಗಿತ್ತು. ಮೇ 3ರಂದು 448 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರು.
ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ 19 ಸೋಂಕು ಪ್ರಕರಣ ಮತ್ತು ಸಾವಿನ ಸಂಖ್ಯೆ ಇಳಿಕೆಯಾಗತೊಡಗಿದೆ. ಬುಧವಾರ ದೆಹಲಿಯಲ್ಲಿ 576 ಕೋವಿಡ್ ಪ್ರಕರಣ ವರದಿಯಾಗಿತ್ತು. ಅಲ್ಲದೇ 103 ಮಂದಿ ಸಾವನ್ನಪ್ಪಿದ್ದರು. ಕಡಿಮೆ ಪ್ರಮಾಣದ ಕೋವಿಡ್ ಸೋಂಕು ಪ್ರಕರಣಗಳ ಹೊರತಾಗಿಯೂ ದೆಹಲಿಯಲ್ಲಿ ಲಾಕ್ ಡೌನ್ ನಿರ್ಬಂಧ ತೆರವು ಒಂದು ಪ್ರಕ್ರಿಯೆಯಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ವಾರ ತಿಳಿಸಿದ್ದರು.
ದೆಹಲಿಯಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿತ್ತು. ಏತನ್ಮಧ್ಯೆ ಕಟ್ಟಡ ನಿರ್ಮಾಣ ಕಾರ್ಯ ಮತ್ತು ಉತ್ಪಾದನಾ ಘಟಕಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಕೋವಿಡ್ 19 ಲಾಕ್ ಡೌನ್ ನಡುವೆಯೇ ಮೊಬೈಲ್ ಆ್ಯಪ್ ಹಾಗೂ ವೆಬ್ ಸೈಟ್ ಮೂಲಕ ಮದ್ಯವನ್ನು ಮನೆ ಬಾಗಿಲಿಗೆ ಸರಬರಾಜು ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿತ್ತು.