ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 213 ಹೊಸ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದ್ದು, ಇದು ಕಳೆದ ಮೂರು ತಿಂಗಳ ಕನಿಷ್ಠ ಪ್ರಕರಣವಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 14,30,884ಕ್ಕೆ ಇಳಿಕೆಯಾಗಿದೆ ಎಂದು ಶನಿವಾರ(ಜೂನ್ 12) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:SSLC ಪರೀಕ್ಷೆ: ಯಾವ ವಿದ್ಯಾರ್ಥಿಯನ್ನು ಫೈಲ್ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ!
ಕಳೆದ 24ಗಂಟೆಯಲ್ಲಿ ದೆಹಲಿಯಲ್ಲಿ ಕೋವಿಡ್ ನಿಂದ 28 ಮಂದಿ ಸಾವನ್ನಪ್ಪಿದ್ದು, ರಾಜಧಾನಿಯಲ್ಲಿ ಒಟ್ಟು ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 24,800ಕ್ಕೆ ತಲುಪಿದೆ ಎಂದು ಹೇಳಿದೆ. ದೆಹಲಿಯ ಪಾಸಿಟಿವಿಟಿ ದರ 0.30ಕ್ಕೆ ಇಳಿಕೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ 24ಗಂಟೆಯಲ್ಲಿ 497 ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದು, ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 3,160ಕ್ಕೆ ಇಳಿಕೆಯಾಗಿದೆ ಎಂದು ವರದಿ ವಿವರಿಸಿದೆ.
ದೆಹಲಿಯಲ್ಲಿ 24ಗಂಟೆಯಲ್ಲಿ 71,513 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಮಾರ್ಚ್ 1 ದೆಹಲಿಯಲ್ಲಿ ದಾಖಲೆಯ 175 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದೀಗ ದೆಹಲಿಯಲ್ಲಿ 213 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಏತನ್ಮಧ್ಯೆ ಕೋವಿಡ್ ಮೂರನೇ ಅಲೆ ಇನ್ನಷ್ಟು ಮಾರಕವಾಗಿರಲಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಯುದ್ದೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.