ದೆಹಲಿ: ರಾಷ್ಟ್ರ ರಾಜಧಾನಿಯ ವಾತಾವರಣ ಶುಕ್ರವಾರವೂ ಬಿಗಡಾಯಿಸಿತ್ತು. ಮಂಜು ಮಿಶ್ರಿತ ಧೂಮ ಇನ್ನೂ ಮುಂದುವರಿದಿದ್ದು, ಜನಸಾಮಾನ್ಯರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಈ ಮಧ್ಯೆ ಸೋಮವಾರದಿಂದ ಜಾರಿಯಾಗಲಿರುವ ಸಮ ಬೆಸ ಸಂಚಾರ ವ್ಯವಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಅಧ್ಯಯನವಿಲ್ಲದೇ ಮನಸಿಗೆ ಬಂದಂತೆ ಜಾರಿಗೊಳಿಸಲಾಗದು. ಯಾವ ಆಧಾರದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂಬ ಬಗ್ಗೆ ದತ್ತಾಂಶ ಅಥವಾ ಅಧ್ಯಯನದ ವಿವರವನ್ನು ಸಲ್ಲಿಸುವಂತೆ ಸರ್ಕಾರವನ್ನು ಕೇಳಿದೆ. ಜತೆಗೆ, ನಾವು ಅನುಮತಿ ನೀಡುವವರೆಗೂ ಅದನ್ನು ಜಾರಿಗೊಳಿಸಬಾರದು ಎಂದೂ ಆದೇಶಿಸಿದೆ.
ಈ ಹಿಂದೆ ಎರಡು ಬಾರಿ ಜಾರಿ ಮಾಡಿದ್ದಾಗ ಹವಾಮಾನದ ಪಿ ಎಂ10ಮತ್ತು ಪಿಎಂ 2.5 ಮಾನದಂಡಗಳಲ್ಲಿ ಹೆಚ್ಚಳ ಕಂಡುಬಂದಿತ್ತು ಎಂದು ಕೇಂದ್ರ ವಾಯು ಮಾಲಿನ್ಯ ನಿಯಂತ್ರಣಾ ಮಂಡಳಿ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎನ್‌ಜಿಟಿ ಈ ಸೂಚನೆ ಹೊರಡಿಸಿದೆ. ಈ ವಿಧಾನದಿಂದ ನೀವು ಜನರು ಇನ್ನಷ್ಟು ವಾಹನ ಖರೀದಿಸುವಂತೆ ಮತ್ತು ದಟ್ಟಣೆ ಹೆಚ್ಚಾಗುವಂತೆ ಮಾಡುತ್ತಿದ್ದೀರಿ. ಪೂರಕ ದತ್ತಾಂಶ ನೀಡದಿದ್ದರೆ ಇದನ್ನು ಅನುಮೋದಿಸಲಾಗದು ಎಂದು ನ್ಯಾಯಮಂಡಳಿ ಸೂಚಿಸಿದೆ.
ಮಧ್ಯಪ್ರಾಚ್ಯದ ಚಂಡಮಾರುತವೂ ಕಾರಣ: ದೆಹಲಿಯಲ್ಲಿ ಹವಾಮಾನ ಸಮಸ್ಯೆಗೆ ಪಕ್ಕದ ರಾಜ್ಯಗಳಲ್ಲಿ ನಡೆಯುತ್ತಿರುವ ಕೃಷಿ ತ್ಯಾಜ್ಯ ಸುಡುವಿಕೆ ಎಷ್ಟು ಕಾರಣವೋ, ಮಧ್ಯಪ್ರಾಚ್ಯದಲ್ಲಿ ಅಕ್ಟೋಬರ್‌ನಲ್ಲಿ ಉಂಟಾಗಿರುವ ಚಂಡಮಾರುತ ಕೂಡ ಕಾರಣ ಎಂದು ವಾಯು ಗುಣಮಟ್ಟ ಮತ್ತು ವಾತಾವರಣ ಮುನ್ಸೂಚನೆ ಹಾಗೂ ಸಂಶೋಧನೆ ವ್ಯವಸ್ಥೆ ವಿಭಾಗ ಹೇಳಿದೆ. ಅಕ್ಟೋಬರ್ ಕೊನೆಯ ವಾರ ಇರಾಕ್, ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಉಂಟಾದ ಚಂಡಮಾರುತದಿಂದ ಧೂಳು ದೆಹಲಿ ಕಡೆಗೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೃಷಿ ತ್ಯಾಜ್ಯ ಸುಡುವಿಕೆ ನಿಯಂತ್ರಿಸಲು ಸೂಚನೆ: ಕೃಷಿ ತ್ಯಾಜ್ಯವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಣೆ ಮಾಡಲು ರೈತರಿಗೆ ಸಲಹೆ ನೀಡಬೇಕು ಎಂದು ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯಂತ್ರಗಳನ್ನು ಖರೀದಿಸಲು ರೈತರಿಗೆ ಸಹಾಯ ಮಾಡುವುದು, ರೈತರಲ್ಲಿ ಅರಿವು ಮೂಡಿಸುವುದು ಸೇರಿದಂತೆ ಇತರ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಉಲ್ಲಂಘಿಸಿದರೆ
ಲಕ್ಷ ರೂ. ದಂಡ
ಮಾಲಿನ್ಯ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಎನ್‌ಜಿಟಿ ಸೂಚನೆ ನೀಡಿದೆ. ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂ ಸಿದರೆ ಅಂಥವರಿಗೆ 1 ಲಕ್ಷ ರೂ. ದಂಡ ವಿಧಿಸುವುದಾಗಿ ಎಚ್ಚರಿಸಿದೆ.
ತಾಜಾ ಗಾಳಿ ಹುಡುಕಿ ಹೊರಟ ದೆಹಲಿ ನಾಗರಿಕರು
ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಕೆಲವು ದಿನಗಳ ಮಟ್ಟಿಗಾದರೂ ಉತ್ತಮ ಗಾಳಿ ಉಸಿರಾಡಬಹುದು ಎಂಬ ಕಾರಣಕ್ಕೆ ದೆಹಲಿ ಜನರು ಹೊರ ಊರುಗಳಿಗೆ ಪ್ರಯಾಣ ಬೆಳೆಸಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ, ಟ್ರಾವೆಲ್ ಏಜೆನ್ಸಿಗಳ ಮುಂದೆ ಜನರು ಸಾಲಾಗಿ ನಿಂತಿರುವ ದೃಶ್ಯ ಈಗ ದೆಹಲಿಯಲ್ಲಿ ಸಾಮಾನ್ಯವಾಗಿದೆ. ಕೇವಲ ಶಿಮ್ಲಾ, ಹಿಮಾಚಲ ಪ್ರದೇಶದಂತ ಸಮೀಪದ ಸ್ಥಳ ಮಾತ್ರವಲ್ಲ, ಸಿಂಗಾಪುರ, ಮಲೇಷ್ಯಾದಂಥ ವಿದೇಶಿ ತಾಣಗಳಿಗೆ ದೆಹಲಿ ಜನರು ಹೊರಟು ನಿಂತಿದ್ದಾರೆ. “ನಮ್ಮನ್ನು ಒಮ್ಮೆ ಇಲ್ಲಿಂದ ಕರೆದೊಯ್ಯಿರಿ’ ಎಂದು ಅವರು ಏಜೆನ್ಸಿಗಳ ಮೊರೆಯಿಡುತ್ತಿದ್ದಾರೆ. ಇನ್ನೊಂದೆಡೆ, ಮಾಸ್ಕ್ಗಳ ದರವೂ 2 ಸಾವಿರ ರೂ.ವರೆಗೆ ತಲುಪಿದೆ.