ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಪಟಾಕಿ ಬಳಕೆಯನ್ನು ನಿಷೇಧಿಸಿದ್ದರೂ ಕೂಡಾ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ ಪರಿಣಾಮ ದೆಹಲಿಯ ವಾಯು ಗುಣಮಟ್ಟ ಪ್ರಮಾಣ ತೀವ್ರ ಕುಸಿದಿದೆ.
ಇದನ್ನೂ ಓದಿ:ಸೈಕಾಲಜಿಕಲ್ ಥ್ರಿಲ್ಲರ್ ‘ಆದ್ಯಂತ’ ಚಿತ್ರದ ಮೂಲಕ ರೀ-ಎಂಟ್ರಿ ಕೊಟ್ಟ ಮಯೂರಿ
ವರದಿಯ ಪ್ರಕಾರ, ರಾಷ್ಟ್ರರಾಜಧಾನಿ ದೆಹಲಿ ಜಗತ್ತಿನ ಅತ್ಯಂತ ಕಲುಷಿತ ನಗರವಾಗಿದೆ. ಎರಡನೇ ಸ್ಥಾನ ಪಾಕಿಸ್ತಾನದ ಲಾಹೋರ್ ನದ್ದಾಗಿದೆ. ಸೋಮವಾರ ಪಟಾಕಿ ಸಿಡಿಸಿದ ಪರಿಣಾಮ 24ಗಂಟೆಯಲ್ಲಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 312ಕ್ಕೆ ಕುಸಿದಿದ್ದು, ತೀವ್ರ ಕಲುಷಿತಗೊಂಡಿರುವುದಾಗಿ ವರದಿ ವಿವರಿಸಿದೆ.
ವಾಯು ಗುಣಮಟ್ಟದ ಸೂಚ್ಯಂಕ(AQI) ಪ್ರಕಾರ, ಶೂನ್ಯದಿಂದ 50ರವರೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ, 51ರಿಂದ 100ರವರೆಗೆ ಸಮಾಧಾನಕರ, 101ರಿಂದ 200ರವರೆಗೆ ಮಧ್ಯಮ, 201ರಿಂದ 300 ಕಲುಷಿತ, 301ರಿಂದ 400ರವರೆಗೆ ತೀವ್ರ ಕಲುಷಿತ ಹಾಗೂ 401ರಿಂದ 500ರವರೆಗೆ ಹದಗೆಟ್ಟ ವಾತಾವರಣ ಎಂದು ಪರಿಗಣಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಅಕ್ಟೋಬರ್ 27ರವರೆಗೆ ಹವಾಮಾನ ಗುಣಮಟ್ಟ ತೀವ್ರ ಕಲುಷಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ದೆಹಲಿಯಲ್ಲಿ ಪಟಾಕಿ ಮಾರಾಟ, ಬಳಕೆ ಬಗ್ಗೆ ನಿಷೇಧ ಹೇರಿದ್ದರೂ ಕೂಡಾ ಹಲವೆಡೆ ಭಾರೀ ಪ್ರಮಾಣದಲ್ಲಿ ಪಟಾಕಿ ಬಳಕೆ ಮಾಡಿರುವುದಾಗಿ ವರದಿ ತಿಳಿಸಿದೆ.