Advertisement

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ “ದೆಹಲಿ ಮಾದರಿ’

06:10 AM Sep 06, 2018 | Team Udayavani |

ಬೆಂಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಿಸಲು “ದೆಹಲಿ ಮಾದರಿ’ ಶಿಕ್ಷಣ ಪದ್ಧತಿ ಅಧ್ಯಯನ ಮಾಡಿ ವರದಿ
ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯ ಸರ್ಕಾರಿ ಶಾಲೆಯ ಶಿಕ್ಷಣ
ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಅಲ್ಲಿನ ಪ್ರಾಂಶುಪಾಲರನ್ನು ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಕರ್ನಾಟಕದ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಸಲುವಾಗಿ ದೆಹಲಿ ಮಾದರಿ ಅಧ್ಯಯನ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಸರ್ಕಾರಿ ಶಾಲೆಗಳ ಸುಧಾರಣೆ ನಮ್ಮ ಮೊದಲ ಆದ್ಯತೆಯಾಗಿದೆ. ಖಾಸಗಿ ಶಾಲೆಗಳಿಗೂ ಮೀರಿದ ಶಿಕ್ಷಣ ಗುಣಮಟ್ಟ ಮತ್ತು ಸೌಲಭ್ಯ ನಮ್ಮದಾಗಬೇಕು ಎಂದರು.

ಅನುದಾನ ಇಳಿಮುಖ: ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಂತಲೂ ಉತ್ತಮವಾದ ಶಿಕ್ಷಣ
ನೀಡುತ್ತಿದ್ದಾರೆ. ಸರ್ವ ಶಿಕ್ಷಾ ಅಭಿಯಾನದಡಿ ರಾಜ್ಯಕ್ಕೆ ಬರುತ್ತಿದ್ದ ಅನುದಾನ ಕಡಿಮೆಯಾಗಿದೆ. ಇದರ ಜತೆಗೆ ಶಿಕ್ಷಣ
ಇಲಾಖೆ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳ ನಡುವಿನ ಗೊಂದಲದಿಂದ ತಾಂತ್ರಿಕ ಸಮಸ್ಯೆ ಹೆಸರಿನಲ್ಲಿ
ಶಿಕ್ಷಕರ ವೇತನ ವಿಳಂಬ ಮಾಡುತ್ತಿದ್ದಾರೆ. ಇನ್ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಿದ್ದೇವೆ ಎಂದು ಹೇಳಿದರು.

ಅನುದಾನ ನೀಡಲು ಸಿದ್ಧ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯದ ಸರ್ಕಾರಿ
ಕಾಲೇಜುಗಳಿಗೆ ಅಗತ್ಯ ಅನುದಾನ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ಅತಿ ಹೆಚ್ಚು ಅನುದಾನ ಪಡೆಯುವ ಕಾಲೇಜು ಉಪನ್ಯಾಸಕರು ಸಮಾಜಕ್ಕೂ ಇದರ ಉಪಯೋಗ ಮಾಡಬೇಕು. 3 ಸಾವಿರ ಪದವಿ ಪೂರ್ವ ಕಾಲೇಜುಗಳ
ಉಪನ್ಯಾಸಕರು, 393 ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ
ರಾಜ್ಯ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಸರ್ಕಾರದ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ. ಖಜಾನೆಯಲ್ಲಿ ನಾಲ್ಕು ಸಾವಿರ ಕೋಟಿ ರೂ.ಗಳಷ್ಟು ಹಣವಿದೆ. ಸರ್ಕಾರದ ಆದಾಯ ಸಂಗ್ರಹ ಶೇ.33ರಷ್ಟು ಏರಿಕೆಯಾಗಿದೆ. ಆದಾಯ ಸೋರಿಕೆ ತಡೆಗಟ್ಟಿ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡುತ್ತಿದ್ದೇವೆ. ರೈತರ ಸಾಲಮನ್ನಾ ಮಾಡಲು ಇತರೆ ಇಲಾಖೆಯ ಕಾರ್ಯಕ್ರಮದ ಹಣ ಬಳಸಿಕೊಂಡಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮುಂದಿನ ಆಗಸ್ಟ್‌ ಒಳಗೆ 30 ಸಾವಿರ ಕೋಟಿ ರೂ. ಪಾವತಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next