Advertisement

AAP; ಭ್ರಷ್ಟಾಚಾರ ಆರೋಪಿ ಆಪ್‌ ಸಚಿವ ರಾಜೀನಾಮೆ

11:45 PM Apr 10, 2024 | |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಸಿಎಂ ಅರವಿಂದ ಕೇಜ್ರಿವಾಲ್‌ ತಿಹಾರ್‌ ಜೈಲಲ್ಲಿ ಇರುವಾಗಲೇ ಅವರಿಗೆ ಇನ್ನೊಂದು ಆಘಾತ ಎದುರಾಗಿದೆ. ಇ.ಡಿ.ಯಿಂದ ಭ್ರಷ್ಟಾ ಚಾರದ ಆರೋಪ ಎದು ರಿಸುತ್ತಿರುವ ಆಪ್‌ ಸಚಿವ ರಾಜ್‌ಕುಮಾರ್‌ ಆನಂದ್‌ ತಮ್ಮ ಸಚಿವ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಅವರ ವಿರುದ್ಧ ಚೀನಕ್ಕೆ 2023ರಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಕೇಸು ದಾಖಲಿಸಿತ್ತು. ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಿರುವ ಸಮಾಜ ಕಲ್ಯಾಣ ಸಚಿವ ರಾಜ್‌ಕುಮಾರ್‌ ಆನಂದ್‌, “ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಆಪ್‌ ಜನ್ಮತಾಳಿತ್ತು. ಆದರೆ ಈಗ ಪಕ್ಷದ ವಿರುದ್ಧವೇ ಹಲವು ಆರೋಪಗಳು ಕೇಳಿ ಬಂದಿವೆ. ಈ ಸರಕಾರದಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ಜತೆಗೆ ಭ್ರಷ್ಟಾಚಾರದಲ್ಲಿ ನನ್ನ ಹೆಸರು ಥಳಕು ಹಾಕಿಕೊಳ್ಳುವುದು ಇಷ್ಟವಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಇದಲ್ಲದೆ, ಹಿಂದುಳಿದ ವರ್ಗದವರು, ದಲಿತರಿಗೆ ಆಮ್‌ ಆದ್ಮಿ ಪಕ್ಷದಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ರಾಜಕುಮಾರ್‌ ಆರೋಪಿಸಿದ್ದಾರೆ.

ಆಪ್‌ಗೆ ಸಂಕಷ್ಟ
ವಿವಿಧ ಪ್ರಕರಣಗಳಲ್ಲಿ ಆಪ್‌ ನಾಯಕರು ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿ ಜೈಲು ಸೇರಿರುವಂತೆಯೇ ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ ನೀಡಿದ್ದಾರೆ. ಅಬಕಾರಿ ನೀತಿ ಹಗರಣದಲ್ಲಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯ, ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಈಗಾಗಲೇ ಬಂಧನದಲ್ಲಿದ್ದಾರೆ.

ತನಿಖಾ ಸಂಸ್ಥೆಗಳ ದುರುಪಯೋಗ
ಸಚಿವ ಸ್ಥಾನಕ್ಕೆ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‌ ಸುದ್ದಿಗೋಷ್ಠಿ ನಡೆಸಿ “ನಮ್ಮ ಪಕ್ಷದ ಶಾಸಕರು, ಸಚಿವರು ರಾಜೀನಾಮೆ ನೀಡುವ ನಿಟ್ಟಿನಲ್ಲಿ ಬಿಜೆಪಿ ಇ.ಡಿ., ಸಿಬಿಐ ಸಹಿತ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಅವರಿಗೆ ರಾಜೀನಾಮೆ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಆಪ್‌ ಆರೋಪಿಸಿದೆ.

Advertisement

“ನಮ್ಮ ಪಕ್ಷದ ಶಾಸಕರಿಗೆ, ಸಂಸದರಿಗೆ ಇದೊಂದು ಅಗ್ನಿಪರೀಕ್ಷೆ’ ಎಂದು ಸಂಜಯ ಸಿಂಗ್‌ ಹೇಳಿಕೊಂಡಿದ್ದಾರೆ. ಅವರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದ ವೇಳೆ ಬಿಜೆಪಿಯೇ ಆನಂದ್‌ ಅವರನ್ನು ಭ್ರಷ್ಟಾಚಾರಿ ಎಂದು ದೂರುತ್ತಿತ್ತು. ಈಗ ಅವರನ್ನೇ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅದ್ದೂರಿಯಾಗಿ ಸ್ವಾಗತಿಸಲು ಮುಂದಾಗಿದೆ’ ಎಂದು ಲೇವಡಿ ಮಾಡಿದ್ದಾರೆ.

ಈ ರಾಜೀನಾಮೆಯಿಂದ ಪಕ್ಷದ ಕೆಲವು ಕಾರ್ಯಕರ್ತರಿಗೆ ಬೇಸರ ಮತ್ತು ಆಘಾತ ತಂದಿರಬಹುದು. ಪಕ್ಷವನ್ನು ಒಡೆಯುವ ಇಂಥ ಪ್ರಯತ್ನಗಳನ್ನು ಆಪ್‌ ಮೆಟ್ಟಿ ನಿಲ್ಲಲಿದೆ ಎಂದು ಸಂಸದ ಸಂಜಯ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. “ಆಮ್‌ ಆದ್ಮಿ ಪಕ್ಷವನ್ನು ಒಡೆಯುವ ನಿಟ್ಟಿನಲ್ಲಿ ಬಿಜೆಪಿ ಇ.ಡಿ., ಸಿಬಿಐಯಂಥ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

ರಾಜ್‌ಕುಮಾರ್‌ ಆನಂದ್‌ ವಿರುದ್ಧ ಇರುವ ಆರೋಪಗಳೇನು?
-2023ರಲ್ಲಿ ಲೆಕ್ಕವಿಲ್ಲದಷ್ಟು ಮೊತ್ತವನ್ನು ಹವಾಲ ಲಿಂಕ್‌ ಮೂಲಕ ಚೀನಕ್ಕೆ ಕಳುಹಿಸಲಾಗಿದ್ದ ಪ್ರಕರಣದಲ್ಲಿ ಶಾಮೀಲು ಆರೋಪ
– ಕಳೆದ ನವೆಂಬರ್‌ನಲ್ಲಿ ಆನಂದ್‌ ನಿವಾಸ ಸಹಿತ 13 ಸ್ಥಳಗಳ ಮೇಲೆ ಇಡಿ ದಾಳಿ.
– ಶೋಧದ ವೇಳೆ ಹಣ ವರ್ಗಾವಣೆ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ ಎನ್ನುವುದು ಇ.ಡಿ. ಸಂಸ್ಥೆಯ ವಾದ.
– ದಾಳಿಯ ವೇಳೆ ಸಿಕ್ಕಿದ್ದ 74 ಲಕ್ಷ ರೂ. ನಗದು ಇದೇ ಪ್ರಕರಣಕ್ಕೆ ಸಂಬಂಧಿಸಿದ್ದು.
– ಆನಂದ್‌ ವಿವಿಧ ಆಮದುಗಳಿಗೆ ಸಂಬಂಧಿಸಿದ 7 ಕೋಟಿ ರೂ. ಕಸ್ಟಮ್ಸ್‌ ಶುಲ್ಕ ಪಾವತಿಸದ್ದಕ್ಕೆ ದೂರು.

ರಾಜ್‌ಕುಮಾರ್‌ ಆನಂದ್‌ ಯಾರು?
– 2011ರಿಂದ ಆಪ್‌ನ ರಾಷ್ಟ್ರೀಯ ಮಂಡಳಿಯ ಸದಸ್ಯ.
– ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ.
– ದಿಲ್ಲಿಯ ಪಟೇಲ್‌ನಗರ ಕ್ಷೇತ್ರದಿಂದ 2020ರ ಚುನಾವಣೆಯಲ್ಲಿ ಜಯ.

ಆಪ್‌ಗೆ ಮಾಫಿಯಾಗಳು ಮತ್ತು ಭ್ರಷ್ಟರು ಯಾವ ರೀತಿ ಪ್ರವೇಶ ಪಡೆದಿದ್ದಾರೆ ಎನ್ನುವುದು ಸಚಿವರ ರಾಜೀನಾಮೆ ಸಾಬೀತು ಮಾಡಿದೆ.
-ಬಿಜೆಪಿ

ಪಕ್ಷ ತೊರೆಯುವಂತೆ ಸಚಿವ ರಾಜ್‌ಕುಮಾರ್‌ ಸಿಂಗ್‌ಗೆ ಬೆದರಿಕೆ ಒಡ್ಡಿರುವ ಸಾಧ್ಯತೆಗಳು ಇವೆ. ಹೀಗಾಗಿಯೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
-ಸೌರಭ್‌ ಭಾರದ್ವಾಜ್‌, ಆಪ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next