ನವದೆಹಲಿ: ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ಸಲಹೆ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಭಯೋತ್ಪಾದಕರು : ಬಿ ಸಿ ಪಾಟೀಲ್
ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳಕ್ಕೆ ಹೆಚ್ಚುವರಿಯಾಗಿ ಒಂದು ಸಾವಿರ ಅರೆಸೇನಾಪಡೆ ಯೋಧರನ್ನು ಕಳುಹಿಸಿದ್ದು, ಇದರೊಂದಿಗೆ ಒಟ್ಟು 1,500 ಮಂದಿ ಸಿಆರ್ ಪಿಎಫ್ ಯೋಧರು ಭದ್ರತೆಯಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
“ನಾವು ದೆಹಲಿಯಲ್ಲಿ ಯಾವುದೇ ಧರಣಿಯಾಗಲಿ, ಹಿಂಸಾಚಾರ ನಡೆಸುವ ಉದ್ದೇಶ ಹೊಂದಿಲ್ಲ. ಎಲ್ಲಾ ಪ್ರತಿಭಟನಾಕಾರರು ದೆಹಲಿ ಗಡಿಭಾಗಕ್ಕೆ ವಾಪಸ್ ಆಗುತ್ತಿರುವುದಾಗಿ” ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ.
ನಿಜವಾದ ರೈತರು ದೆಹಲಿ ಬಿಟ್ಟು ತೆರಳಿ: ಪಂಜಾಬ್ ಸಿಎಂ
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ನಿಜವಾದ ರೈತರು ಕೂಡಲೇ ದೆಹಲಿಯನ್ನು ತೊರೆದು ಗಡಿ ಪ್ರದೇಶಕ್ಕೆ ವಾಪಸ್ ಆಗುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ವೇಳೆ ನಡೆದ ಕೆಲವು ಘಟನೆ ಹಿಂಸಾಚಾರದಿಂದ ಕೂಡಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಹಿನ್ನಡೆಯಾದಂತೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.