ಮುಂಬೈ: “ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಏಕೆ ವಿಧಾನಸಭೆ ಅಧಿವೇಶನ ನಡೆಸುತ್ತಿದೆ’? ಹೀಗೆಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಕರಾರು ತೆಗೆದಿದ್ದಾರೆ. ರಾಜ್ಯ ಸರ್ಕಾರ ಡಿ.19 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಸಭೆ ಅಧಿವೇಶನ ನಡೆಸಲು ಸಿದ್ಧತೆ ನಡೆಸಿರುವಂತೆಯೇ ಹೊಸತಾಗಿ ಮೊಂಡು ವಾದ ಮಂಡಿಸಿದ್ದಾರೆ.
ಇದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದಿದ್ದ ಸಭೆ ಕರ್ನಾ ಟಕದ ಪರವಾಗಿಯೇ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಮಹಾರಾಷ್ಟ್ರದ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದರು.
ಒಟ್ಟಾರೆಯಾಗಿ ಬೆಳಗಾವಿ ವಿವಾದದಲ್ಲಿ ಮಹಾ ರಾಷ್ಟ್ರದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಗುದ್ದಾಟ ಬಿರುಸಾಗಿ ನಡೆದಿದೆ.
ಮುಂಬೈನಲ್ಲಿ ಮಹಾ ವಿಕಾಸ ಅಘಾಡಿ ಮುಖಂಡರ ಜತೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ “ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವ ಅಂಶವನ್ನೂ ಸಾಧಿಸಲಾಗಿಲ್ಲ. ಬದಲಾಗಿ ಕರ್ನಾಟಕದ ಹಿತಕಾಯಲಾಗಿದೆ. ಮಹಾರಾಷ್ಟ್ರ ಈಗಾಗಲೇ ಹೊಂದಿರುವ ಗಾಯದ ಮೇಲೆ ಉಪ್ಪು ಸವರಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿವೇಶನ ಏಕೆ? ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ವಿಧಾನಸಭೆ ಅಧಿವೇಶನವನ್ನು ಯಾವ ಕಾರಣಕ್ಕಾಗಿ ನಡೆಸುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ ಯಾವ ಆಧಾರದಲ್ಲಿ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾನ್ಯತೆ ನೀಡಿದೆ ಎಂದು ವರಾತ ತೆಗೆದಿದ್ದಾರೆ ಉದ್ಧವ್. ಗಡಿ ವಿವಾದ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಯಲ್ಲಿ ಇರುವಾಗ ಇಂಥ ಕ್ರಮವೇಕೆ ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಸುತ್ತಮುತ್ತಲ ಪ್ರದೇಶದ ಸ್ಥಳಗಳು ಕರ್ನಾಟಕವನ್ನು ತ್ಯಜಿಸಿ ಮಹಾ ರಾಷ್ಟ್ರಕ್ಕೆ ಸೇರಲು ಇಚ್ಛಿಸುತ್ತಿವೆ. ಈ ಬಗ್ಗೆ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಹಳೆಯ ವಾದವನ್ನೇ ಪತ್ರಿಕಾಗೋಷ್ಠಿಯಲ್ಲಿ ಮುಂದಿಟ್ಟರು.
ನಾಳೆ ಪ್ರತಿಭಟನೆ: ಬೆಳಗಾವಿ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ಮಹಾರಾಷ್ಟ್ರದ ಬಗ್ಗೆ ಪ್ರೀತಿ ಇರುವವರು ಅದರಲ್ಲಿ ಭಾಗಹಿಸಬೇಕು ಎಂದು ಉದ್ಧವ್ ಹೇಳಿದ್ದಾರೆ. ಬೆಳಗಾವಿಯಂಥ ಗಡಿ ವಿವಾದ ರಾಜ್ಯಕ್ಕೆ ಅವಮಾನ ಎಂದರು.
ವಿವಾದ ಪರಿಹರಿಸಲು ಯತ್ನ: ಇದೇ ವೇಳೆ, ಮಾಜಿ ಸಿಎಂ ಉದ್ಧವ್ ಠಾಕ್ರೆ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ ಕರ್ನಾಟಕದ ಜತೆಗಿನ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದ ಬದ್ಧವಾಗಿದೆ. ಅದರಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಇಚ್ಛಿಸಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ವಿರುದ್ಧವಾಗಿ ಟ್ವೀಟ್ ಮಾಡಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ ಎಂದರು ಸಿಎಂ ಶಿಂಧೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ, ವಿವಾದ ಬಗೆಹರಿಸಲು ಮುಂದಾಗಿದೆ. ಎರಡೂ ರಾಜ್ಯಗಳಲ್ಲಿ ಇರುವ ಜನರಿಗೆ ತೊಂದರೆ ಯಾಗದಂತೆ ವರ್ತಿಸಬೇಕಾಗಿದೆ ಎಂದರು.