Advertisement
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡಿತ್ತು. ತಾನು ಅಧಿಕಾರಕ್ಕೆ ಬಂದರೆ ಈ ಬಗ್ಗೆ ಮರು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಚುನಾವಣಾ ಪೂರ್ವ ವಾಗ್ಧಾನದ ಪ್ರಕಾರ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದೆ. ಎಸ್‌ಐಟಿಯ ಪ್ರಾಥಮಿಕ ತನಿಖೆಯ ಪ್ರಕಾರವೇ ಈ ಹಗರಣದ ಹೆಜ್ಜೆ ಗುರುತುಗಳು ದಿಲ್ಲಿಯವರೆಗೂ ಇದೆ ಎನ್ನಲಾಗುತ್ತಿದೆ. ಜತೆಗೆ ಸ್ಥಳೀಯ ಪ್ರಭಾವಿಗಳ ಸಂಪರ್ಕವನ್ನೂ ಶಂಕಿಸಲಾಗಿದೆ. ಹೀಗಾಗಿ ಈ ವಿಚಾರದಲ್ಲಿ ಪ್ರತಿ ನಿಲುವು ತೆಗೆದುಕೊಳ್ಳುವಾಗಲೂ ತನಿಖಾ ಸಂಸ್ಥೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
Related Articles
Advertisement
ಆಕ್ಷೇಪ:
ಬಿಟ್ ಕಾಯಿನ್ ಪ್ರಕರಣದ ಬಳಿಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದಲ್ಲಿನ ಸೈಬರ್ ಸುರಕ್ಷತೆ ಬಗ್ಗೆ ಆಕ್ಷೇಪ ವ್ಯಕ್ತವಾಗಿವೆ. ಹೀಗಾಗಿ ದತ್ತಾಂಶ ಭದ್ರತಾ ಕಾಯ್ದೆಗಳ ಬಗ್ಗೆ ಪದೇ ಪದೆ ಚರ್ಚೆ ಹಾಗೂ ತಿದ್ದುಪಡಿಗಳು ನಡೆಯುತ್ತಿವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ಜತೆಗೆ ಡಿಜಿಟಲ್ ಆರ್ಥಿಕತೆ ಪ್ರಗತಿ ಕಾಣುತ್ತಿದೆ. ಆದಾಗಿಯೂ ಸೈಬರ್ ವಂಚನೆ ಹಾಗೂ ಡೇಟಾ ಸುರಕ್ಷತೆ ಸಮರ್ಪಕವಾಗಿಲ್ಲ ಎಂದು ಕಾರ್ಪೊರೇಟ್ ವಲಯಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತಿರುವುದರಿಂದ ಈಗ ಸೈಬರ್ ನೀತಿ ಹಾಗೂ ಐಟಿ ಆ್ಯಕ್ಟ್ ಜಾರಿಗೆ ಪ್ರಯತ್ನ ಆರಂಭವಾಗಿದೆ.
ಗೃಹ ಇಲಾಖೆ ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸೈಬರ್ ನೀತಿಯ ಸ್ವರೂಪ ಭವಿಷ್ಯದಲ್ಲಿ ತಾಂತ್ರಿಕ ಜಾಗೃತಿಯ ಸ್ವರೂಪದಲ್ಲಿ ಮಾತ್ರ ನಿಲ್ಲುವುದಿಲ್ಲ. ಐಟಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ, ಎಥಿಕಲ್ ಹ್ಯಾಕಿಂಗ್, ಕೃತಕ ಬುದ್ಧಿಮತ್ತೆಯ ಸದ್ಬಳಕೆ ಮತ್ತು ನಿಯಂತ್ರಣ ಸೇರಿದಂತೆ ಹಲವು ಮಜಲುಗಳನ್ನು ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸರ್ಕಾರಿ ಸ್ವಾಮ್ಯದ ದತ್ತಾಂಶ ರಕ್ಷಣೆ, ಹೊಸದಾಗಿ ಪ್ರಾರಂಭವಾಗುವ ತಂತ್ರಾಂಶ ರಕ್ಷಣೆ, ಆನ್‌ಲೈನ್ ಬ್ಯಾಂಕಿಂಗ್, ತಾಂತ್ರಿಕ ಸಾಕ್ಷರತೆ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಹಾಗೂ ತರಬೇತಿ ನೀಡಲು ಕಾಯ್ದೆಯಲ್ಲಿ ನಿರ್ಧರಿಸಲಾಗಿದೆ. ದತ್ತಾಂಶ ಖಾಸಗೀಕರಣದ ಬಗ್ಗೆ ರಹಸ್ಯ ಸಮೀಕ್ಷೆಗಳು ಕೂಡ ಭವಿಷ್ಯದಲ್ಲಿ ನಡೆಯಲಿದೆ.
ರಾಘವೇಂದ್ರ ಭಟ್