Advertisement

ದೆಹಲಿ ಕರ್ನಾಟಕ ಸಂಘ: ಕಾರಂತ, ಮಹಿಷಿ, ಕನ್ನಡ ಭಾರತಿ ಪ್ರಶಸ್ತಿ ಪ್ರದಾನ

05:12 PM Dec 23, 2018 | Team Udayavani |

ಹೊಸದಿಲ್ಲಿ/ಮುಂಬಯಿ: ದೆಹಲಿ ಕರ್ನಾಟಕ ಸಂಘವು ನೀಡುವ ಡಾ|  ಶಿವರಾಮ ಕಾರಂತ ಪ್ರಶಸ್ತಿಯನ್ನು ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಮತ್ತು ಕನ್ನಡ ಭಾರತಿ ರಂಗ ಪ್ರಶಸ್ತಿಯನ್ನು ರಂಗಕರ್ಮಿ ಸುರೇಶ್‌ ಆನಗಳ್ಳಿ ಅವರಿಗೆ ಸಂಘದ ಸಭಾಂಗಣದಲ್ಲಿ ಡಿ.16ರಂದು ಜರಗಿದ ಸಮಾರಂಭದಲ್ಲಿ ಪ್ರದಾನಿಸಲಾಯಿತು.

Advertisement

ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡುತ್ತ, ಡಾ. ಸರೋಜಿನಿ ಮಹಿಷಿ ಪ್ರಶಸ್ತಿ ವಿಜೇತರಾದ ಡಾ| ಚಂದ್ರಶೇಖರ ಪಾಟೀಲ್‌ ಅವರು ಕಾರಣಾಂತರಗಳಿಂದ ದಿಲ್ಲಿಗೆ ಬರಲಾಗದಿದ್ದು ದರಿಂದ ಅವರ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನಿಸಲಾಗುವುದು  ಎಂದರು.  

ಡಾ|  ಶಿವರಾಮ ಕಾರಂತ ಪ್ರಶಸ್ತಿಯನ್ನು ಎರಡು ವರ್ಷಕ್ಕೊಮ್ಮೆ ನೀಡುತ್ತಿದ್ದೇವೆ, ಅದು ಪ್ರತಿ ವರ್ಷ ನೀಡುವಂತಾಗಬೇಕು. ಅಲ್ಲದೇ, ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಗಳ ಮೊತ್ತವನ್ನು ಕೂಡಾ ಹೆಚ್ಚಿಸಲು ಪ್ರಯತ್ನ ಮಾಡಬೇಕೆಂದು ತಿಳಿಸುತ್ತ  ಈ ಮೂರು ಪ್ರಶಸ್ತಿಗಳ ಆಯ್ಕೆ ಸಮಿತಿಗೆ ಬೆಳ್ಳಾರೆ ಅವರು ಧನ್ಯವಾದ ಸಲ್ಲಿಸಿದರು.

ಡಾ:  ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಸುಬ್ರಾಯ ಚೊಕ್ಕಾಡಿ ಅವರು, ಕಾರಂತರ ಜೊತೆಗಿನ ತಮ್ಮ ಸ್ನೇಹ ಮತ್ತು ಜಗಳಗಳನ್ನು ತಮ್ಮ ಎಂದಿನ ಶೈಲಿಯಲ್ಲಿ ನೆನಪಿಸಿಕೊಂಡರು. ದೆಹಲಿ ಕರ್ನಾಟಕ ಸಂಘದ ಕನ್ನಡ ಭಾರತಿ ಪ್ರಶಸ್ತಿ ಸ್ವೀಕರಿಸಿದ ಸುರೇಶ್‌ ಅನಗಳ್ಳಿ ಅವರು, ರಂಗಕರ್ಮಿಗಳ ದುಡಿಮೆ ಮತ್ತು ಅದು ಬಹಳ ಬೇಗ ಜನಮಾನಸದಿಂದ ಮರೆಯಾಗುವ ಪರಿಯನ್ನು ಸೂಕ್ಷ್ಮ¾ವಾಗಿ ವಿವರಿಸಿದರು.

ಸಮಾರೋಪ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಅವರು, ಹೊರನಾಡ ಕನ್ನಡಿಗರ ದುಡಿಮೆಯನ್ನು ಕೊಂಡಾಡಿದರು ಹಾಗೂ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ವಿಶ್ವವಿದ್ಯಾಲಯಗಳಲ್ಲೂ ನಡೆಯುವುದಿಲ್ಲ ಎಂದರು.

Advertisement

ಇದೇ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಖ್ಯಾತ ಜಾನಪದ ವಿದ್ವಾಂಸರಾದ ಡಾ| ಪುರುಷೋತ್ತಮ ಬಿಳಿಮಲೆ ಅವರು, ದೆಹಲಿ ಕರ್ನಾಟಕ ಸಂಘದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನನಗೆ ತುಂಬ ಕಾಲ ನೆನಪಿನಲ್ಲಿರುತ್ತದೆ ಎಂದು ಹೇಳಿದರು. ಶಿವರಾಮ ಕಾರಂತರು ಮೂವತ್ತರ ದಶಕದಲ್ಲಿ ಇತರ ಬರಹಗಾರರಿಗಿಂತ ಕಾಲದ ದೃಷ್ಟಿಯಿಂದ ಮುಂದಕ್ಕಿದ್ದರು. ಕಾರಂತರ ಎಲ್ಲಾ ಕೃತಿಗಳಲ್ಲಿಯು ಕೂಡಾ ಕಂಡುಬರುವುದು ಅಪೂರ್ವವಾದ ಒಂದು ಜೀವನಶ್ರದ್ಧೆ. ಇದೇ ಬಗೆಯ ಜೀವನಶ್ರದ್ಧೆಯನ್ನು ಇಟ್ಟುಕೊಂಡು ಬದುಕಿದ ಮತ್ತು ಬರೆದ ಇನ್ನೊಬ್ಬ ಬರಹಗಾರರು ಸುಬ್ರಾಯ ಚೊಕ್ಕಾಡಿಯವರು. ಸಂಘವು ಅವರಿಗೆ ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡಿ ತನ್ನ ಗೌರವವನ್ನು ಹೆಚ್ಚಿಸಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಪೂಜಾ ಪಿ. ರಾವ್‌ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next