ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಸತ್ಯೇಂದರ್ ಜೈನ್ ಅವರಿಗೆ ಕೋವಿಡ್ 19 ಸೋಂಕು ತಗಲಿರುವುದು ಇಂದು ದೃಢಪಟ್ಟಿದೆ.
ಸಚಿವ ಸತ್ಯಂದರ್ ಜೈನ್ ಅವರಿಗೆ ಮಂಗಳವಾರದಂದು ನಡೆಸಿದ್ದ ಕೋವಿಡ್ ಸೋಂಕು ಪತ್ತೆ ಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು.
ಆದರೆ ಸಚಿವರಿಗೆ ತೀವ್ರ ಜ್ವರದ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರಿಗೆ ಇಂದು ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಅವರಲ್ಲಿ ಕೋವಿಡ್ 19 ಸೋಂಕಿನ ಲಕ್ಷಣಗಳು ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಆಪ್ ನಾಯಕಿ ಅತಿಶಿ ಅವರಲ್ಲೂ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದಕ್ಕೂ ಮುಂಚೆ ಕಳೆದ ವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೋವಿಡ್ 19 ಸೋಂಕು ಪತ್ತೆ ತಪಾಸಣೆಗೆ ಒಳಗಾಗಿದ್ದರು ಮತ್ತು ಅವರ ತಪಾಸಣಾ ವರದಿ ನೆಗೆಟಿವ್ ಬಂದಿತ್ತು. ಕೇಜ್ರಿವಾಲ್ ಅವರಲ್ಲಿ ಜ್ವರ ಹಾಗೂ ಗಂಟಲು ನೋವಿನ ಲಕ್ಷಣಗಳು ಕಂಡುಬಂದಿದ್ದವು.
ದೆಹಲಿಯಲ್ಲಿ ಕೋವಿಡ್ 19 ಸೋಂಕು ಪರಿಸ್ಥಿತಿಯನ್ನು ನಿಯಂತ್ರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರವಿವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಮನಿಷ್ ಸಿಸೋಡಿಯಾ ಉಪಸ್ಥಿತರಿದ್ದ ಸಭೆಯಲ್ಲಿ ಸತ್ಯೇಂದರ್ ಜೈನ್ ಅವರು ಭಾಗವಹಿಸಿದ್ದರು.
ಈ ನಡುವೆ ಸೋಮವಾರ ರಾತ್ರಿ ಸತ್ಯೇಂದರ್ ಅವರಿಗೆ ತೀವ್ರ ಜ್ವರ ಹಾಗೂ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಪ್ ಶಾಸಕಿ ಅತಿಶಿಗೂ ಕೋವಿಡ್ 19 ಸೋಂಕು
ಆಮ್ ಆದ್ಮಿ ಪಕ್ಷದ ಕಲ್ಕಾಜಿ ಕ್ಷೇತ್ರದ ಶಾಸಕಿ ಅತಿಶಿ ಅವರಲ್ಲೂ ಕೋವಿಡ್ 19 ಸೋಂಕು ಪಾಸಿಟಿವ್ ಆಗಿದೆ. ಅತಿಶಿ ಅವರಿಗೆ ಸಣ್ಣ ಪ್ರಮಾಣದ ಜ್ವರ ಹಾಗೂ ಕೆಮ್ಮು ಕಂಡುಬಂದ ಕಾರಣ ಅವರು ಕೋವಿಡ್ 19 ಸೋಂಕು ಪತ್ತೆ ತಪಾಸಣೆಗೆ ಒಳಗಾಗಿದ್ದರು.
ತಪಾಸಣಾ ವರದಿ ಇಂದು ಕೈಸೇರಿದ್ದು ಪಾಸಿಟಿವ್ ಬಂದಿದೆ. ಅತಿಶಿ ಅವರು ಇದೀಗ ಹೋಂ ಕ್ವಾರೆಂಟೈನಲ್ಲಿದ್ದಾರೆ ಹಾಗೂ ವೈರಸ್ ಲಘು ಲಕ್ಷಣಗಳು ಆಕೆಯಲ್ಲಿ ಕಂಡುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.