ನವದೆಹಲಿ:ಈ ಬಾರಿ ವಾಯುಮಾಲಿನ್ಯ ಮುಕ್ತ ದೀಪಾವಳಿ ಆಚರಿಸಲು ದೆಹಲಿ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ದೀಪಾವಳಿಯಂದು ಕೇವಲ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಲು ಮಾತ್ರ ಅನುಮತಿ ನೀಡುವುದಾಗಿ ತಿಳಿಸಿದೆ. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ವಾಯುಮಾಲಿನ್ಯ ಉಂಟು ಮಾಡಬಲ್ಲ ಪಟಾಕಿಯನ್ನು ಸಿಡಿಸಿದರೆ ಒಂದು ಲಕ್ಷ ರೂಪಾಯಿವರೆಗೆ ಭಾರೀ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಆಮ್ ಆದ್ಮಿ ಪಕ್ಷದ ಸರ್ಕಾರ ನವೆಂಬರ್ 3ರಿಂದ ಪಟಾಕಿ ವಿರೋಧಿ ಅಭಿಯಾನ ಆರಂಭಿಸುವುದಾಗಿ ತಿಳಿಸಿದೆ. ಅಲ್ಲದೇ ಇದಕ್ಕಾಗಿ ಡಿಪಿಸಿಸಿಯ ಹನ್ನೊಂದು ತಂಡಗಳನ್ನು ರಚಿಸಲಾಗಿದೆ. ಇದನ್ನು ಹೊರತುಪಡಿಸಿ ವಾಯುಮಾಲಿನ್ಯ ಕಡಿಮೆ ಮಾಡಲು ಹೊಸ ವಿಧಾನ ಜಾರಿಗೆ ತರಲು ದಿಲ್ಲಿ ಸರ್ಕಾರ ಸಿದ್ದತೆ ನಡೆಸಿದ್ದು, ಹಸಿರು ಪಟಾಕಿಗಳನ್ನು ಬಳಸಲು ಉತ್ತೇಜನ ನೀಡಿದೆ.
2018ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಕೇವಲ ಹಸಿರು ಪಟಾಕಿಯನ್ನು ಮಾತ್ರ ಉತ್ಪಾದಿಸಿ, ಮಾರಾಟ ಮಾಡಿ ಬಳಸುವಂತೆ ನಿರ್ದೇಶನ ನೀಡಿರುವುದಾಗಿ ದಿಲ್ಲಿ ಪರಿಸರ ಖಾತೆ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ:ಡ್ರಗ್ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೇಶ್ ಕೊಡಿಯೇರಿ ಇಡಿ ವಶಕ್ಕೆ
ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಹಳೆ ಸ್ಟಾಕ್ ಇದೆಯೇ ಎಂಬುದನ್ನು ಪರೀಕ್ಷಿಸಲು ದಿಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು 11 ವಿಶೇಷ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ ಎಂದು ಹೇಳಿದರು.