Advertisement

Delhi Flood: ಐಎಎಸ್‌ ಆಕಾಂಕ್ಷಿ ವಿದ್ಯಾರ್ಥಿಗಳ ಮೃತ್ಯುಗೆ ಕಾರು ಚಾಲಕ ಕಾರಣನಾ?

08:36 PM Jul 29, 2024 | Team Udayavani |

ಹೊಸದಿಲ್ಲಿ: ಧಾರಾಕಾರ ಸುರಿದ ಮಳೆಗೆ ದಿಢೀರ್‌ ನೀರು ನುಗ್ಗಿ ಐಎಎಸ್‌ ತರಬೇತಿ ಕೇಂದ್ರದ ಮೂವರು ವಿದ್ಯಾರ್ಥಿಗಳ ಬಲಿ ಪಡೆದ ದಿಲ್ಲಿಯ ರಾಜೇಂದ್ರ ನಗರ ದುರಂತ ಪ್ರಕರಣದ ಪ್ರಮುಖ ಆರೋಪಿ ಎಸ್‌ಯುವಿ ಕಾರಿನ ಚಾಲಕನ ಬಂಧಿಸಲಾಗಿದ್ದು, ಈತ ಪ್ರವಾಹದ ನಡುವೆಯೇ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಐಎಎಸ್‌ ಕೋಚಿಂಗ್‌ ಸೆಂಟರ್‌ನ ಗೇಟು ಮುರಿದಿದ್ದಾನೆ. ಇದರ ಪರಿಣಾಮ ನೆಲಮಾಳಿಗೆಗೆ ನೀರು ನುಗ್ಗಿತ್ತು.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಐವರನ್ನು ಬಂಧಿಸಿದ್ದು, ಕೋಚಿಂಗ್‌ ಸೆಂಟರ್‌ ಮಾಲೀಕ ಅಭಿಷೇಕ್‌ ಗುಪ್ತಾ ಸೇರಿ ಒಟ್ಟು ಏಳು ಮಂದಿಯನ್ನು ಈ ವರೆಗೆ ಬಂಧಿಸಲಾಗಿದೆ. ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಟ್ಟಡದ ಗೇಟ್‌ ಮುರಿದು ಬಿದ್ದಿತ್ತು ಎನ್ನಲಾಗಿದೆ. ಇನ್ನು ಈ ಸಂಬಂಧ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕಾರು ಚಾಲಕನ ನಿರ್ಲಕ್ಷ್ಯಕ್ಕಾಗಿ ಆತನ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದುರಂತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಮಧ್ಯೆ ದುರಂತದಿಂದ ಪಾರಾದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹೃದೇಶ್ ಚೌಹಾಣ್ ಘಟನೆ ಯಾವಾಗ ನಡೆಯಿತು ಎಂಬುದರ ಆಘಾತಕಾರಿ ವಿಡಿಯೋ  ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ನೆಲಮಹಡಿಯು ಹತ್ತು ನಿಮಿಷಗಳಲ್ಲಿ ಪ್ರವಾಹದಿಂದ ತುಂಬಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ.  ಶನಿವಾರ ಸಂಜೆ 6.40ಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡಲೇ ಆಗಮಿಸದ್ದರಿಂದ  ಮೂವರು ಐಎಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ಬುಲ್ಡೋಜರ್‌ಗಳ ಕಾರ್ಯಾಚರಣೆ: 
ಘಟನಾ ಸ್ಥಳವಾದ ರಾಜೇಂದ್ರ ನಗರದಲ್ಲಿ ಸೋಮವಾರ ಬೆಳಗ್ಗೆ ಬುಲ್ಡೋಜರ್‌ಗಳು ಸ್ಥಳದಲ್ಲಿ ಬೀಡು ಬಿಟ್ಟು ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆಯ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ)  ನಡೆಸಿದೆ. ಚರಂಡಿಗಳಿಗೆ ತಡೆಯಾಗಿದ್ದ ಸಿಮೆಂಟ್‌ ಇಟ್ಟಿಗೆಗಳು  ಹಾಗೂ ಚರಂಡಿಗಳ ಸ್ವಚ್ಛಗೊಳಿಸಿ ಸಲೀಸಾಗಿ ನೀರು ಹರಿಯುವಂತೆ ಮಾಡಿದೆ. ಬುಲ್ಡೋಜರ್‌ಗಳು ಕಾರ್ಯಾಚರಣೆ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದಕ್ಕೂ ಮುನ್ನ ಅಕ್ರಮವಾಗಿ ನಿರ್ಮಿಸಿರುವ 13 ಕೋಚಿಂಗ್‌ ಸೆಂಟರ್‌ಗಳಿಗೆ  ಬೀಗ ಜಡಿದಿದೆ.

Advertisement

ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ ಮನವಿ: 

ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಹಾಗೂ ಇತರರ ನಿರ್ಲಕ್ಷ್ಯ ಖಂಡಿಸಿ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಪತ್ರ ಬರೆದು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಮನವಿ ಮಾಡಿದ್ದಾರೆ.

ಶನಿವಾರ ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next