ಹೊಸದಿಲ್ಲಿ: ಸ್ಥಿರವಿಲ್ಲದ ನಿರ್ವಹಣೆ ಯಿಂದ ಸತತ ಪಂದ್ಯಗಳಲ್ಲಿ ಸೋತಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ಮಂಗಳವಾರದ ಪಂದ್ಯ ದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದು ಗುರುವಾರದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿದೆ.
ಈ ಹಿಂದಿನ ಐಪಿಎಲ್ ಕೂಟವನ್ನು ಗಮನಿಸಿ ದರೆ ಈ ಬಾರಿ ಡೆಲ್ಲಿ ತಂಡದ ಅಭಿ ಯಾನ ಉತ್ತಮವಾಗಿಲ್ಲ. ಸತತ ಐದು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಅಂಕಪಟ್ಟಿಯ ಕೆಳಗಿನ ಅರ್ಧ ದಲ್ಲಿ ಸ್ಥಾನ ಪಡೆದಿತ್ತು. ಆದರೆ ಹೈದರಾಬಾದ್ ವಿರುದ್ಧ ಅಮೋಘ ಗೆಲುವು ದಾಖಲಿಸಿದ ಡೆಲ್ಲಿ ತಂಡ ಸದ್ಯ ಹೊಸ ಹುರುಪಿನಲ್ಲಿದೆ.
ಈ ಗೆಲುವಿನಿಂದ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆಯಲ್ಲದೇ ಪ್ಲೇ ಆಫ್ಗೆ ತೇರ್ಗಡೆಯಾಗುವ ಬಾಗಿಲು ತೆರೆದಿದೆ. ಆದರೆ ಮುಂದಿನ ಎಲ್ಲ ಪಂದ್ಯಗಳಲ್ಲಿ ಡೆಲ್ಲಿ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ ಮತ್ತು ಇದರ ಜತೆ ಇತರ ಪಂದ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶ ಸಿಕ್ಕಿದರೆ ಡೆಲ್ಲಿ ಮುನ್ನಡೆಯುವ ಅವಕಾಶವಿದೆ.
ಈ ಹಿಂದಿನ ಪಂದ್ಯಗಳಲ್ಲಿ ಡೆಲ್ಲಿಯ ಬ್ಯಾಟಿಂಗ್ ಬಗ್ಗೆ ತೀವ್ರವಾದ ಟೀಕೆಗಳು ಬಂದಿದ್ದವು. ಆದರೆ ಹೈದರಾಬಾದ್ ವಿರುದ್ಧ ತಂಡದ ಅಗ್ರ ಕ್ರಮಾಂಕದ ಎಲ್ಲ ಆಟಗಾರರು ಅಮೋಘ ವಾಗಿ ಆಡಿದ್ದರಿಂದ ತಂಡ ಜಯಭೇರಿ ಬಾರಿಸುವಂತಾಯಿತು. ಆದರೆ ಈ ಪಂದ್ಯದಲ್ಲಿ ತಂಡದ ಬೌಲಿಂಗ್ ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಹೈದರಾಬಾದ್ 185 ರನ್ ತಲುಪುವಂತಾ ಯಿತು. ಬ್ಯಾಟಿಂಗ್ ಮಾಡಿದ ಎಲ್ಲ ಆಟಗಾರರು ಗೆಲುವಿಗೆ ತಮ್ಮ ಕೊಡುಗೆ ಸಲ್ಲಿಸಿದ್ದರಿಂದ ಡೆಲ್ಲಿ ಇನ್ನೂ ಐದು ಎಸೆತಗಳಿರುವಂತೆ ಜಯ ಸಾಧಿಸಿತ್ತು. ಆರಂಭಿಕರಾದ ಕರುಣ್ ನಾಯರ್ (39), ಸಂಜು ಸ್ಯಾಮ್ಸನ್ (24), ರಿಷಬ್ ಪಂತ್ (34), ಶ್ರೇಯಸ್ ಅಯ್ಯರ್ (33), ಕೋರಿ ಆ್ಯಂಡರ್ಸನ್ (41 ಔಟಾಗದೆ) ಮತ್ತು ಕ್ರಿಸ್ ಮೊರಿಸ್ ಅಜೇಯ 15 ರನ್ ಗಳಿಸಿ ತಂಡದ ಗೆಲುವು ಸಾರಿದರು.
ಡೆಲ್ಲಿ ತಂಡದ ಬೌಲಿಂಗ್ ದ್ರಾವಿಡ್ ಅವರಿಗೆ ಚಿಂತೆಯನ್ನುಂಟುಮಾಡಿದೆ. ಗಾಯಗೊಂಡಿರುವ ಜಹೀರ್ ಖಾನ್ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿಯ ವೇಗದ ದಾಳಿ ಯಾವುದೇ ಪರಿಣಾಮ ಉಂಟುಮಾಡಿಲ್ಲ. ಕಾಗಿಸೊ ರಬಾಡ, ಮೊರಿಸ್ ಮತ್ತು ಮೊಹಮ್ಮದ್ ಶಮಿ ಬಹಳಷ್ಟು ರನ್ ಬಿಟ್ಟುಕೊಟ್ಟಿದ್ದಾರೆ. ಒಂದು ವೇಳೆ ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ ಮತ್ತು ಜಯಂತ್ ಯಾದವ್ ಹೈದರಾಬಾದ್‌ನ ರನ್‌ವೇಗಕ್ಕೆ ಕಡಿವಾಣ ಹಾಕದಿರುತ್ತಿದ್ದರೆ ಅದರ ಮೊತ್ತ 200ರ ಗಡಿ ದಾಟುವ ಸಾಧ್ಯತೆಯಿತ್ತು.
ಗುಜರಾತ್‌ಗೆ ನಿರಾಸೆ: ಸತತ ಸೋಲು ಕಂಡಿರುವ ಗುಜರಾತ್ ಲಯನ್ಸ್ ಬಹುತೇಕ ಪ್ಲೇ ಆಫ್ನಿಂದ ಹೊರಬಿದ್ದಿದೆ. ಏನಾದರೂ ಪವಾಡ ನಡೆದರೆ ತೇರ್ಗಡೆಯಾಗಬಹುದಷ್ಟೇ. ಆಡಿದ 10 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದ್ದ ಗುಜರಾತ್ ಆರಂಕದೊಂದಿಗೆ ಏಳನೇ ಸ್ಥಾನದಲ್ಲಿದೆ.
ಕಳೆದ ವರ್ಷ ತನ್ನ ಚೊಚ್ಚಲ ಐಪಿಎಲ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಗುಜರಾತ್ ಈ ಬಾರಿ ನಿರಾಶಾದಾಯಕ ನಿರ್ವಹಣೆ ನೀಡಿದೆ. ಬ್ರೆಂಡನ್ ಮೆಕಲಮ್, ಫಿಂಚ್, ರೈನಾ, ಡ್ವೇನ್ ಸ್ಮಿತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಬಲವಿದ್ದರೂ ಯಾರೂ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿಲ್ಲ.