ದೆಹಲಿ: ಐಫೋನ್ ಗಾಗಿ ಖರೀದಿಗಾಗಿ ಕಾಯುತ್ತಿದ್ದ ಗ್ರಾಹಕರು ಮೊಬೈಲ್ ಅಂಗಡಿಯ ಉದ್ಯೋಗಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿರುವ ಘಟನೆ ದೆಹಲಿಯ ಕಮಲಾ ನಗರದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಭಾರತದಲ್ಲಿ ಐಫೋನ್ 15 ಬಿಡುಗಡೆಯಾಗಿದೆ. ಶುಕ್ರವಾರದಿಂದ (ಸೆ.22 ರಿಂದ) ಮಾರುಕಟ್ಟೆಯಲ್ಲಿ ಐಫೋನ್ 15ಸರಣಿಯ ಫೋನ್ ಗಳು ಬಂದಿವೆ. ಮುಂಬೈ, ದಿಲ್ಲಿ ಆ್ಯಪಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಐಫೋನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಐಫೋನ್ ಖರೀದಿಗೆ ಬಂದಿದ್ದ ಗ್ರಾಹಕರು ಮೊಬೈಲ್ ಸಿಬ್ಬಂದಿಗಳನ್ನೇ ಥಳಿಸಿರುವ ಘಟನೆಯೊಂದು ದೆಹಲಿಯ ಕಮಲಾ ನಗರದ ಕ್ರೋಮಾ ಸ್ಟೋರ್ ನಲ್ಲಿ ನಡೆದಿರುವುದಾಗಿ “ದಿ ಫ್ರೀ ಪ್ರೆಸ್ ಜರ್ನಲ್ʼʼ ವರದಿ ಮಾಡಿದೆ.
ಕ್ರೋಮಾ ಸ್ಟೋರ್ ನಲ್ಲಿ ಗ್ರಾಹಕರು ಐಫೋನ್ ಖರೀದಿಗಾಗಿ ನಿಂತಿದ್ದ ವೇಳೆ ಅಲ್ಲಿನ ಸಿಬ್ಬಂದಿಯ ಜೊತೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸಿಬ್ಬಂದಿ ಐಫೋನ್ 15 ಪ್ರೊ ಮಾರಾಟ ಮಾಡಲು ನಿರಾಕರಿಸಿದ್ದಾರೆ. ಇದಕ್ಕೆ ಸಿಟ್ಟಾದ ಗ್ರಾಹಕರು ಸಿಬ್ಬಂದಿಯತ್ತ ಧಾವಿಸಿ ಆತನ ಮೇಲೆ ಹಲ್ಲೆಗೈದಿದ್ದಾರೆ. ಇದನ್ನು ನೋಡಿದ ಇತರರ ಸಿಬ್ಬಂದಿಗಳು ತಪ್ಪಿಸಲು ಯತ್ನಿಸಿದ್ದರೂ, ಸಿಬ್ಬಂದಿಯ ಮೇಲೆ ಇಬ್ಬರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಐಫೋನ್ 15 ಪ್ರೊ ಮಾರಾಟ ಮಾಡಲ್ಲ ಎನ್ನುವುದಕ್ಕಾಗಿಯೇ ಈ ಜಗಳ ಉಂಟಾಗಿದೆ ಎನ್ನವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಅಲ್ಲಿದ್ದವರು ಈ ರೀತಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದುವರೆಗೆ ಯಾವ ಪೊಲೀಸ್ ಪ್ರಕರಣ ಈ ಕುರಿತು ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.