ಹೊಸದಿಲ್ಲಿ : ಪ್ರತಿಪಕ್ಷ ನಾಯಕರುಗಳನ್ನು ಭೇಟಿ ಮಾಡುತ್ತಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಿಡಿ ಕಾರಿದೆ.
ಕೇಜ್ರಿವಾಲ್ ಮೇ 24 ರಂದು ಉದ್ಧವ್ ಠಾಕ್ರೆ ಮತ್ತು ಮೇ 25 ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿ ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ ಬೆಂಬಲ ಕೋರಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅತ್ಯಂತ ಭ್ರಷ್ಟ ಎಂದು ಹಲವರು ಅರ್ಥಮಾಡಿಕೊಂಡಿದ್ದಾರೆ ಆದರೆ ಅವರೇ ಇತರರ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುತ್ತಾರೆ ಎಂದು ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಕಿಡಿ ಕಾರಿದ್ದಾರೆ. ಕೇಜ್ರಿವಾಲ್ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಭೇಟಿಯಾದ ಬಳಿಕ ಆಕ್ರೋಶ ಹೊರ ಹಾಕಿದ್ದಾರೆ.
ದೆಹಲಿ ಸಿಎಂ ಕೇವಲ ರಾಜಕೀಯ ಮಾಡಲು ಬಯಸುತ್ತಾರೆ ಮತ್ತು ಕೇಂದ್ರ ಸರ್ಕಾರ ಮತ್ತು ದೇಶದ ಆಡಳಿತ ಪಕ್ಷವನ್ನು ನಿಂದಿಸಲು ಬಯಸುತ್ತಾರೆ ಎಂದು ಬಿಜೆಪಿ ಸಂಸದ ಹರ್ಷವರ್ಧನ್ ಅಧಿಕಾರಿ ವರ್ಗದ ವರ್ಗಾವಣೆ ಕುರಿತ ಕೇಂದ್ರದ ಸುಗ್ರೀವಾಜ್ಞೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯಲ್ಲಿರುವ ಕೇಜ್ರಿವಾಲ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.