ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಈಗ ನನ್ನದೇ ಗೀಳು; ಆತ ಅನಗತ್ಯವಾಗಿ ನನ್ನ ಬೆನ್ನಿಗೆ ಬಿದ್ದಿದ್ದಾರೆ; ಆತ ಜನರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ದಿಲ್ಲಿ ಮುಖ್ಯಮಂತ್ರಿಯ ನಿಘಂಟಿನಲ್ಲಿ ಅತೀ ಹೆಚ್ಚು ಹುಡುಕಲಾಗುತ್ತಿರುವ ಹೆಸರೆಂದರೆ ರಾಬರ್ಟ್ ವಾದ್ರಾ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದಾರೆ.
ಕೇಜ್ರಿವಾಲ್ ಅವರು ದಿಲ್ಲಿ ವಿಧಾನಸಭೆಯಲ್ಲಿ ಮೊನ್ನೆ ಮಂಗಳವಾರ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದರು.
“ಮೋದಿ ಅವರೇ ನೀವು ಆಪ್ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮಾತ್ರವೇ ಬಂಧಿಸಬಹುದು; ದೀಕ್ಷಿತ್ ಅವರನ್ನು ಅಲ್ಲ; ನಿಮಗೆ ನಿಜಕ್ಕೂ 56 ಇಂಚಿನ ಎದೆ ಇರುವುದಾದರೆ ನೀವು ರಾಬರ್ಟ್ ವಾದ್ರಾ ವಿರುದ್ಧ ಧ್ವನಿ ಎತ್ತಬೇಕು. ಒಂದೊಮ್ಮೆ ನೀವು ಹಾಗೆ ಮಾಡಿದರೆ ವಾದ್ರಾ ನಿಮ್ಮನ್ನು ಜೀವಂತ ತಿಂದು ಹಾಕಿಯಾರು. ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ತಪ್ಪಿಗೆ ನೀವು ದಿಲ್ಲಿಯ ಅಮಾಯಕ ಜನರ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತಿದ್ದೀರಿ; ನಮ್ಮ ಅಭಿವೃದ್ಧಿ ಕೆಲಸಗಳಿಗೆ ತಡೆಯೊಡ್ಡುತ್ತಿದ್ದೀರಿ; ಆದರೂ ಆ ಎಲ್ಲ ಅಡೆತಡೆಗಳ ಹೊರತಾಗಿಯೂ ನಾವು ಬಹಳಷ್ಟನ್ನು ಸಾಧಿಸಿದ್ದೇವೆ’ ಎಂದು ಕೇಜ್ರಿವಾಲ್ ರೋಷಾವೇಶದಿಂದ ಹೇಳಿದ್ದರು.