ನವದೆಹಲಿ: ದೆಹಲಿ ಹೈಕೋರ್ಟಿಂದ ತರಾಟೆಗೆ ಒಳಗಾದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಸಂಜೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ 9 ದಿನಗಳಿಂದ ನಡೆಸುತ್ತಿದ್ದ ಧರಣಿ ಕೊನೆಗೊಳಿಸಿ ದ್ದಾರೆ. ಹೀಗಾಗಿ, ದೆಹಲಿ ಸರ್ಕಾರ-ಲೆಫ್ಟಿನೆಂಟ್
ಗವರ್ನರ್ ಅನಿಲ್ ಬೈಜಲ್ ನಡುವಿನ ಸಮರ ತಾತ್ಕಾಲಿಕವಾಗಿ ಮುಕ್ತಾಯಗೊಂಡಿದೆ. ಇದಕ್ಕೂ ಮೊದಲು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಐಎಎಸ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವಂತೆ ಸಿಎಂ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.
ಅದಕ್ಕೆ ಪೂರಕವಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಅಧಿಕಾರಿಗಳ ಜತೆಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಬುಧವಾರ ಕೂಡ ಐಎಎಸ್ ಅಧಿಕಾರಿಗಳ ಸಭೆ ಮುಂದುವರಿಯಲಿದೆ.
ಬೆಳಗ್ಗೆ ನಡೆದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ನಡೆಸುತ್ತಿದ್ದ ಧರಣಿ ಬಗ್ಗೆ ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಜತೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಬಿಕ್ಕಟ್ಟು ಪರಿಹರಿ ಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.
ಜತೆಗೆ ಕೇಂದ್ರದ ಸೂಚನೆಯಂತೆ ಲೆಫ್ಟಿನೆಂಟ್ ಗವರ್ನರ್ ವರ್ತಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ದೂರಿದ್ದರು.