Advertisement

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

01:24 AM Sep 21, 2020 | Hari Prasad |

ದುಬಾಯಿ: ಅರಬ್ ನಾಡಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಎರಡನೇ ಪಂದ್ಯ ಚುಟುಕು ಕ್ರಿಕೆಟ್ ನ ರೋಚಕತೆಗೆ ಕಿಚ್ಚು ಹಚ್ಚಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ಇಂದು ನಡೆದ ರೋಚಕ ಸೆಣೆಸಾಟದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ ಕಾರಣ ಪಂದ್ಯ ಟೈಗೊಂಡಿದೆ.

ಈ ಬಾರಿಯ IPLನ ಮೊದಲ ಸೂಪರ್ ಓವರ್ ಗೆ ಸಾಕ್ಷಿಯಾದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 1 ಓವರ್ ನಲ್ಲಿ ಕೇವಲ 2 ರನ್ ಮಾಡಲಷ್ಟೇ ಶಕ್ತವಾಯಿತು.

ಕೆ.ಎ.ಲ್. ರಾಹುಲ್ 2 ರನ್ ಮಾಡಿ ಔಟಾದರೆ ಬಳಿಕ ಪೂರಣ್ ಅವರೂ ರಬಾಡಾಗೆ ಬೌಲ್ಡ್ ಆದರು. ಅಲ್ಲಿಗೆ ಕೇವಲ ಮೂರೇ ಎಸೆತಗಳಲ್ಲಿ ಸೂಪರ್ ಓವರ್ ನ ಪ್ರಥಮ ಇನ್ನಿಂಗ್ಸ್ ಮುಕ್ತಾಯಗೊಂಡಿತ್ತು.

ಇದನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ಎಸೆತದಲ್ಲೇ ಗೆಲುವಿನ ಗುರಿ ಮುಟ್ಟಿ ಸಂಭ್ರಮಿಸಿದರು.

Advertisement

ಇದನ್ನೂ ಓದಿ: ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

ಇದಕ್ಕೂ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 157 ರನ್ ಗಳ ಗುರಿಯನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಲಾರಂಭಿಸಿದ ಕಿಂಗ್ಸ್ ಪಂಜಾಬ್ ಮೊದಲ ವಿಕೆಟ್ ಗೆ 30 ರನ್ ಗಳನ್ನು ಕಲೆ ಹಾಕಿತು.

ಕ್ಯಾಪ್ಟನ್ ಕೆ.ಎಲ್. ರಾಹುಲ್ 21 ರನ್ ಮಾಡಿ ಔಟಾದರು. ಆದರೆ ಅರಬ್ ನಾಡಿನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಸ್ಟೋಯ್ನ್ಸ್ ಬಿರುಗಾಳಿ ಬೀಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ಮಯಾಂಕ್ ಅಗರ್ವಾಲ್ (89) ರನ್ ಮಳೆಯನ್ನೇ ಸುರಿಸಿದರು.

19.5 ಓವರ್ ತನಕ ಸಿಡಿಯುತ್ತಲೇ ಸಾಗಿದ್ದ ಮಯಾಂಕ್ ಅಗರ್ವಾಲ್ ಒಂದು ಹಂತದಲ್ಲಿ 101 ಕ್ಕೆ 6ರಲ್ಲಿ ಸಂಕಟಪಡುತ್ತಿದ್ದ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದರು.

ಆದರೆ ಕೊನೆಯಲ್ಲಿ ಅಗರ್ವಾಲ್ ಹೈಟ್ಮೇರ್ ಗೆ ಕ್ಯಾಚ್ ಕೊಟ್ಟು ಔಟಾಗುವುದರೊಂದಿಗೆ ಪಂದ್ಯದ ಚಿತ್ರಣವೇ ಬದಲಾಯಿತು. ಆಗ ಪಂಜಾಬ್ ಗೆಲುವಿಗೆ 1 ಎಸೆತದಲ್ಲಿ 1 ರನ್ನಿನ ಅವಶ್ಯಕತೆ ಇತ್ತು.

ಆದರೆ ಆ ಹಂತದಲ್ಲಿ ಕ್ರಿಸ್ ಜೋರ್ಡಾನ್ ಸ್ಟೋಯ್ನ್ಸ್ ಎಸೆತದಲ್ಲಿ ರಬಾಡಗೆ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ಪಂದ್ಯ ರೋಚಕ ಟೈಯಲ್ಲಿ ಅಂತ್ಯಗೊಂಡಿತು.

ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಸ್ಟೋಯ್ನ್ಸ್ ಗಿಂತಲೂ ಸ್ಪೋಟಕವಾಗಿತ್ತು. ಆರಂಭಿಕನಾಗಿ ಕ್ರೀಸಿಗೆ ಬಂದ ಅಗರ್ವಾಲ್ ಇನ್ನಿಂಗ್ಸ್ ನ ಕೊನೆಯವರೆಗೆ ಆಟವಾಡಿದ್ದು ವಿಶೇಷವಾಗಿತ್ತು.

ಒಟ್ಟು 60 ಎಸೆತಗಳನ್ನು ಎದುರಿಸಿದ ಅಗರ್ವಾಲ್ 4 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಾಯದಿಂದ 89 ರನ್ ಗಳಿಸಿದರು.

ಡೆಲ್ಲಿ ಪರ ರವಿಚಂದ್ರನ್ ಅಶ್ವಿನ್, ರಬಾಡಾ ಹಾಗೂ ಸ್ಟೋಯ್ನ್ಸ್ ತಲಾ 2 ವಿಕೆಟ್ ಪಡೆದು ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next