Advertisement

ಮಾರ್ಗನ್‌ ಮಾರ್ಗಕ್ಕೆ ತಡೆಯೊಡ್ಡೀತೇ ಡೆಲ್ಲಿ?

11:08 PM Oct 12, 2021 | Team Udayavani |

ಶಾರ್ಜಾ: ಸೆಮಿಫೈನಲ್‌ ಮಹತ್ವ ಪಡೆದಿರುವ ದ್ವಿತೀಯ ಕ್ವಾಲಿಫೈಯರ್‌ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ಸಜ್ಜಾಗಿವೆ. ಬ್ಯಾಟಿಂಗಿಗೆ ಕಠಿನವಾಗಿ ಪರಿಣಮಿಸುವ ಶಾರ್ಜಾ ಅಂಗಳದಲ್ಲಿ ಈ ಮಹತ್ವದ ಮುಖಾಮುಖಿ ಏರ್ಪಡಲಿದೆ. ಸೂಪರ್‌ ಪ್ರದರ್ಶನ ನೀಡಿ ಗೆದ್ದ ತಂಡ ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

Advertisement

ಕಣದಲ್ಲಿರುವ ಕೊನೆಯ 3 ತಂಡಗಳಲ್ಲಿ ಡೆಲ್ಲಿ ಮಾತ್ರ ಈ ವರೆಗೆ ಐಪಿಎಲ್‌ ಚಾಂಪಿಯನ್‌ ಆಗಿಲ್ಲ. ಕಳೆದ ವರ್ಷ ರನ್ನರ್ ಅಪ್‌ ಎನಿಸಿದ್ದೇ ಅತ್ಯುತ್ತಮ ಸಾಧನೆ. ಕೆಕೆಆರ್‌ 2 ಸಲ ಟ್ರೋಫಿ ಎತ್ತಿದೆ. ಧೋನಿ ನೇತೃತ್ವದ ಚೆನ್ನೈ 3 ಬಾರಿ ಚಾಂಪಿಯನ್‌ ಆಗಿದೆ. ಉಳಿದಿರುವ ಮೂರರಲ್ಲಿ ಲಕ್‌ ಯಾರಿಗಿದೆ ಎಂಬ ಒಂದು ಹಂತದ ಕುತೂಹಲಕ್ಕೆ ಬುಧವಾರ ರಾತ್ರಿ ತೆರೆ ಬೀಳಲಿದೆ.

ಆರ್‌ಸಿಬಿಯನ್ನು ಕೆಡವಿದ ಉತ್ಸಾಹ
ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಚೆನ್ನೈಗೆ ಶರಣಾದ ಡೆಲ್ಲಿ ಕ್ಯಾಪಿಟಲ್ಸ್‌ ಮರಳಿ ಆತ್ಮವಿಶ್ವಾಸ ಗಳಿಸಿಕೊಂಡು ಹೋರಾಟಕ್ಕಿಳಿಯಬೇಕಾದ ಒತ್ತಡದಲ್ಲಿದೆ. ಇನ್ನೊಂದೆಡೆ ಇಯಾನ್‌ ಮಾರ್ಗನ್‌ ನೇತೃತ್ವದ ಕೆಕೆಆರ್‌ ಬ್ಯಾಟರಿ ರೀಚಾರ್ಜ್‌ ಮಾಡಿಸಿಕೊಂಡಂತಿದೆ. ಲೀಗ್‌ನಲ್ಲಿ ತನಗಿಂದ ಮೇಲಿನ ಸ್ಥಾನದಲ್ಲಿದ್ದ ಬಲಿಷ್ಠ ಆರ್‌ಸಿಬಿಯನ್ನು ಕೆಡವಿದ ಸ್ಫೂರ್ತಿ ತುಂಬಿ ತುಳುಕುತ್ತಿದೆ. ಖಂಡಿತವಾಗಿಯೂ ಇದು ಕೋಲ್ಕತಾಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎಂಬುದು ಮೇಲ್ನೋಟದ ಲೆಕ್ಕಾಚಾರ.

ಸೋಮವಾರದ ಎಲಿಮಿನೇಟರ್‌ನಲ್ಲಿ ಆರ್‌ಸಿಬಿಯೇ ನೆಚ್ಚಿನ ತಂಡವಾಗಿತ್ತು. ಆದರೆ ಮಾರ್ಗನ್‌ ಪಡೆ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಅದೆಷ್ಟೋ ಕಾಲದ ಬಳಿಕ ಸುನೀಲ್‌ ನಾರಾಯಣ್‌ ಆಲ್‌ರೌಂಡ್‌ ಶೋ ಒಂದನ್ನು ನೀಡಿ ಕೊಹ್ಲಿ ಪಡೆಯ ಕಪ್‌ ಕನಸನ್ನು ಭಗ್ನಗೊಳಸಿದರು. ಇದೇ ಲಯದಲ್ಲಿ ಸಾಗಿದರೆ ಕೆಕೆಆರ್‌ ಟೇಬಲ್‌ ಟಾಪರ್‌ ಡೆಲ್ಲಿಗೂ ಶಾಕ್‌ ಕೊಟ್ಟರೆ ಅಚ್ಚರಿಯೇನಿಲ್ಲ.

ಇದನ್ನೂ ಓದಿ:ಮಿಥಾಲಿ ರಾಜ್‌ ಶತಕದ ದಾಖಲೆ ಮುರಿದ ಆ್ಯಮಿ ಹಂಟರ್‌

Advertisement

ಬ್ಯಾಟಿಂಗ್‌ ಲೈನ್‌ಅಪ್‌…
ಕೆಕೆಆರ್‌ಗೆ ಹೋಲಿಸಿದರೆ ಡೆಲ್ಲಿಯ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ. ಇದು ಧವನ್‌, ಶಾ, ಅಯ್ಯರ್‌, ಪಂತ್‌, ಹೆಟ್‌ಮೈರ್‌ ಅವರನ್ನೊಳಗೊಂಡಿದೆ.

ಕೆಕೆಆರ್‌ನ ಅಗ್ರ ಕ್ರಮಾಂಕದ ತುಂಬೆಲ್ಲ ಭಾರತೀಯರೇ ತುಂಬಿದ್ದಾರೆ. ವಿ. ಅಯ್ಯರ್‌ಗಿಲ್‌, ತ್ರಿಪಾಠಿ, ಕಾರ್ತಿಕ್‌… ಹೀಗೆ ಲೈನ್‌ಅಪ್‌ ಸಾಗುತ್ತದೆ. ಮಾರ್ಗನ್‌, ಶಕಿಬ್‌, ರಸೆಲ್‌ ವಿದೇಶಿ ಪ್ರಮುಖರು. ಇವರಲ್ಲಿ ಮ್ಯಾಚ್‌ ವಿನ್ನರ್‌ ಯಾರಾಗಬಲ್ಲರು ಎಂಬುದೊಂದು ಕುತೂಹಲ.

ಬೌಲಿಂಗ್‌ ಮೇಲುಗೈ ನಿರೀಕ್ಷೆ
ಇದು ಶಾರ್ಜಾ ಅಂಗಳದ ಸಮರವಾದ್ದರಿಂದ ಎರಡೂ ತಂಡಗಳ ಬೌಲಿಂಗ್‌ ವಿಭಾಗ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಇತ್ತಂಡಗಳಲ್ಲೂ ಸಮರ್ಥ ಹಾಗೂ ಟಿ20 ಸ್ಪೆಷಲಿಸ್ಟ್‌ ಬೌಲರ್ ಇರುವುದರಿಂದ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

ಕೆಕೆಆರ್‌ ಚಕ್ರವರ್ತಿ, ಸುನೀಲ್‌ ನಾರಾಯಣ್‌, ಶಿವಂ ಮಾವಿ, ಶಕಿಬ್‌ ಅಲ್‌ ಹಸನ್‌, ಲಾಕಿ ಫರ್ಗ್ಯುಸನ್‌ ಅವರನ್ನು ಅವಲಂಬಿಸಿದೆ. ಇವರೊಂದಿಗೆ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಸೇರಿಕೊಂಡರಂತೂ ಕೋಲ್ಕತಾ ಬೌಲಿಂಗ್‌ ಇನ್ನಷ್ಟು ಘಾತಕವೆನಿಸಲಿದೆ. ರಸೆಲ್‌ ಎಂಬ ಅಸ್ತ್ರವನ್ನು ಮಾರ್ಗನ್‌ ಕ್ವಾಲಿಫೈಯರ್‌ಗೆ ಮೀಸಲಿರಿಸಿದಂತೆ ಕಾಣುತ್ತದೆ.

ಡೆಲ್ಲಿಯ ಬೌಲಿಂಗ್‌ನಲ್ಲೂ ವೆರೈಟಿ ಇದೆ. ನೋರ್ಜೆ, ಆವೇಶ್‌ ಖಾನ್‌, ರಬಾಡ, ಟಾಮ್‌ ಕರನ್‌, ಅಕ್ಷರ್‌ , ಆರ್‌. ಅಶ್ವಿ‌ನ್‌ ಇಲ್ಲಿನ ಪ್ರಮುಖರು. ಎರಡೂ ತಂಡಗಳ ಬೌಲಿಂಗ್‌ ವಿಭಾಗ ಶಾರ್ಜಾ ಟ್ರ್ಯಾಕ್ ಮಟ್ಟಿಗೆ ಖಂಡಿತ ವಾಗಿಯೂ ಘಾತಕ. ಹೀಗಾಗಿ ಈ ದಾಳಿಯನ್ನು ಎದುರಿಸಿ ನಿಂತು ಬ್ಯಾಟ್‌ ಬೀಸಬಲ್ಲ ತಂಡಕ್ಕೆ ಗೆಲುವು ಒಲಿಯುವ ಸಾಧ್ಯತೆ ಹೆಚ್ಚು.

ಇಂದಿನ ಪಂದ್ಯ: ಕ್ವಾಲಿಫೈಯರ್‌-2
ಡೆಲ್ಲಿ vs ಕೆಕೆಆರ್‌
ಸ್ಥಳ: ಶಾರ್ಜಾ,
ಆರಂಭ: 7.30,
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

 

 

Advertisement

Udayavani is now on Telegram. Click here to join our channel and stay updated with the latest news.

Next