ಹೊಸದಿಲ್ಲಿ: ‘ವೇಗವಾಗಿ ಕಾರು ಓಡಿಸಿ ವ್ಯಕ್ತಿಯೊಬ್ಬನ ಪ್ರಾಣ ತೆಗೆಯುವ ಚಾಲಕನಿಗೆ ವಿಧಿಸುವ ಶಿಕ್ಷೆಗಿಂತಲೂ ಅಪಘಾತದಲ್ಲಿ ಹಸುವನ್ನು ಕೊಂದ ಚಾಲಕನಿಗೇ ಹೆಚ್ಚು ಶಿಕ್ಷೆ ವಿಧಿಸುವುದು ಇಂದಿನ ಕಾನೂನುಗಳ ವೈಶಿಷ್ಟ್ಯ…’ 2008ರಲ್ಲಿ ನಡೆದ ಅಪಘಾತವೊಂದರಲ್ಲಿ ಬಿಎಂಡಬ್ಲ್ಯು ಕಾರನ್ನು ಬೈಕ್ ಸವಾರನ ಮೇಲೆ ಹರಿಸಿ ಆತನ ಸಾವಿಗೆ ಕಾರಣನಾಗಿದ್ದ ಹರಿಯಾಣದ ಉದ್ಯಮಿಯೊಬ್ಬರ ಪುತ್ರನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಮೂರ್ತಿಗಳ ಅಭಿಪ್ರಾಯವಿದು. ಹಸು ಕೊಂದವರಿಗೆ ಕನಿಷ್ಠ 5, 7 ಇಲ್ಲವೇ ಕೆಲವು ರಾಜ್ಯಗಳಲ್ಲಿ 14 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಆದರೆ
ಅಜಾಗರೂಕ ಚಾಲನೆ ಮಾಡಿ ವ್ಯಕ್ತಿಯೊಬ್ಬನ ಅಮೂಲ್ಯ ಜೀವ ತೆಗೆದವರಿಗೆ ಕೇವಲ 2 ವರ್ಷ ಶಿಕ್ಷೆ ವಿಧಿಸಬೇಕಿದೆ. ಕಾನೂನಿನಲ್ಲಿ ಇರುವ ಶಿಕ್ಷೆಯ ಮಿತಿ ಇಷ್ಟೆ’ ಎಂದು ದಿಲ್ಲಿಯ ಹೆಚ್ಚುವರಿ ಸೆಷನ್ಸ್ ಜಡ್ಜ್ ಸಂಜೀವ್ ಕುಮಾರ್ ವಿಷಾದಿಸಿದ್ದಾರೆ. ಈ ತೀರ್ಪಿನ ಪ್ರತಿಯನ್ನು ಪ್ರಧಾನಿ ಮೋದಿ ಅವರಿಗೂ ಕಳುಹಿಸಿಕೊಡಿ. ಇಂಥ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಹೆಜ್ಜೆಯಿಡಲಿ ಎಂದಿದ್ದಾರೆ.