Advertisement

ವಿರೋಧದ ನಡುವೆಯೇ ದೆಹಲಿ ವಿಧೇಯಕ ಮಂಡನೆ

09:36 PM Aug 01, 2023 | Team Udayavani |

ನವದೆಹಲಿ: ದೆಹಲಿ ಆಡಳಿತಾತ್ಮಕ ಸೇವೆಗಳ ವಿಧೇಯಕ ವಿಚಾರದಲ್ಲಿ ಪ್ರತಿಪಕ್ಷಗಳು ವಿನಾ ಕಾರಣ ರಾಜಕೀಯ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಸಂವಿಧಾನದ 249ನೇ ವಿಧಿಯ ಅನ್ವಯ ದೆಹಲಿಗಾಗಿ ಕಾಯ್ದೆ, ಕಾನೂನುಗಳನ್ನು ರೂಪಿಸುವ ಅಧಿಕಾರ ಸಂಸತ್‌ಗೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಮಿತ್‌ ಶಾ ಪರವಾಗಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಲೋಕಸಭೆಯಲ್ಲಿ ಮಂಗಳವಾರ ವಿಧೇಯಕ ಮಂಡಿಸಿದರು. “ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ದೆಹಲಿ (ತಿದ್ದುಪಡಿ) ವಿಧೇಯಕ 2023′ ಎಂಬ ಹೆಸರಿನ ಈ ವಿಧೇಯಕದ ವಿರುದ್ಧ ವ್ಯಕ್ತವಾಗುವ ಯಾವುದೇ ರೀತಿಯ ವಿರೋಧ ಕೇವಲ ರಾಜಕೀಯ ಪ್ರೇರಿತ. ಸಂಸತ್‌ನ ನಿಯಮಗಳನ್ನು ಉಲ್ಲೇಖೀಸಿ ಮಾಡುವ ವಿರೋಧ ಸರಿಯಲ್ಲ’ ಎಂದರು.

Advertisement

ಈ ವೇಳೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ “ಎಲ್ಲರಿಗೂ ಮಾತನಾಡುವ ಅವಕಾಶ ಕಲ್ಪಿಸಲಾಗುತ್ತದೆ. ವಿನಾ ಕಾರಣ ಗದ್ದಲ ಸಲ್ಲದು’ ಎಂದರು. ಆರ್‌ಎಸ್‌ಪಿ ಸಂಸದ ಎನ್‌.ಕೆ. ಪ್ರೇಮ್‌ಚಂದ್ರನ್‌ ವಿಧೇಯಕ ವಿರೋಧಿಸುವುದಾಗಿ ಆಕ್ರೋಶಭರಿತರಾಗಿ ಹೇಳಿದರು. ಅದಕ್ಕೆ ಉತ್ತರಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ “ವಿಧೇಯಕಕ್ಕೆ ಅನುಮೋದನೆ ಪಡೆಯಲು ಸಂಸತ್‌ಗೆ ಸಾಧ್ಯವಿದೆ. ಅದರ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷಗಳು ಸಿದ್ಧರಾಗಲಿ’ ಎಂದರು.

ಬಿಜೆಡಿ ಬೆಂಬಲ:
ಸದ್ಯ ಹೊರಡಿಸಲಾಗಿರುವ ಸುಗ್ರೀವಾಜ್ಞೆ ವಿರುದ್ಧ ದನಿ ಎತ್ತುವಂತೆ ಪ್ರತಿಪಕ್ಷಗಳ ಬೆಂಬಲ ಕೋರಿದ್ದ ಆಪ್‌ಗೆ ಹಿನ್ನಡೆಯಾಗಿದೆ. ಒಡಿಶಾ ಆಡಳಿತ ಪಕ್ಷ ಬಿಜು ಜನತಾ ದಳ ಲೋಕಸಭೆ, ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ.

ಕಲಾಪ ಮುಂದೂಡಿಕೆ:
ಇನ್ನೊಂದೆಡೆ, ಮಣಿಪುರ ವಿಚಾರದಲ್ಲಿ ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳ ಕೋಲಾಹಲ ಮಂಗಳವಾರವೂ ಉಭಯ ಸದನಗಳಲ್ಲಿ ಮುಂದುವರಿಯಿತು. ಗದ್ದಲದ ನಡುವೆಯೇ ಮೂರು ವಿಧೇಯಕಗಳ ಅಂಗೀಕಾರ ಹಾಗೂ ದೆಹಲಿ ಸೇವೆಗಳ ವಿಧೇಯಕ ಮಂಡನೆ ಮುಗಿಸಿ ಲೋಕಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಒಕ್ಕೂಟದ ಸದಸ್ಯರು ಮಣಿಪುರ ವಿಚಾರದಲ್ಲಿ ಗದ್ದಲವೆಬ್ಬಿಸಿ ಕಲಾಪ ಬಹಿಷ್ಕರಿಸಿ ಹೊರನಡೆದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಸೈಬರ್‌ ವಂಚನೆ ಸಂತ್ರಸ್ತರಿಗೆ ಪರಿಹಾರ?
ಸೈಬರ್‌ ವಂಚನೆಯ ಸಂತ್ರಸ್ತರಿಗೆ ಹಣಕಾಸು ಸಂಸ್ಥೆಗಳು ಕೂಡಲೇ ಪರಿಹಾರ ನೀಡುವಂತಾಗಬೇಕು ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಯಾರಿಗಾದರೂ ಸೈಬರ್‌ ವಂಚನೆ ನಡೆದರೆ, ಕೂಡಲೇ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಆ ಗ್ರಾಹಕನ ಖಾತೆಗೆ ಮೊತ್ತವನ್ನು ಆಟೋಮ್ಯಾಟಿಕ್‌ ಆಗಿ ಜಮೆ ಮಾಡಬೇಕು. ಈ ಮೊತ್ತಕ್ಕೆ ಬೇಕಿದ್ದರೆ ಮಿತಿ ಹಾಕಬಹುದು. ಒಟ್ಟಿನಲ್ಲಿ ಗ್ರಾಹಕನಿಗೆ ತತ್‌ಕ್ಷಣವೇ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಆರ್‌ಬಿಐ ಸ್ವಯಂಚಾಲಿತ ಪರಿಹಾರ ವ್ಯವಸ್ಥೆ ಜಾರಿ ಮಾಡಬೇಕು ಎಂದು ಬಿಜೆಪಿ ಸಂಸದ ಜಯಂತ್‌ ಸಿನ್ಹಾ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

Advertisement

ಅಂಗಾಂಗ ಕಸಿ ಹೆಚ್ಚಳ:
ಕೊರೊನಾನಂತರ ದೇಶದಲ್ಲಿ ಅಂಗಾಂಗ ಜೋಡಣೆಯಂಥ ಶಸ್ತ್ರಚಿಕಿತ್ಸೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ. 2023ರಲ್ಲಿ ಈವರೆಗೆ(7 ತಿಂಗಳಲ್ಲಿ) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 7,107 ಅಂಗಾಂಗ ಜೋಡಣೆ ಶಸ್ತ್ರಚಿಕಿತ್ಸೆಗಳು ನಡೆದಿವೆ. 2022ರಲ್ಲಿ ಇಡೀ ವರ್ಷದಲ್ಲಿ ಈ ಸಂಖ್ಯೆ 16,041 ಆಗಿತ್ತು ಎಂದೂ ಹೇಳಿದೆ.

ವಿಧೇಯಕದಲ್ಲಿ ಏನೇನು ತಿದ್ದುಪಡಿ?
– ರಾಜ್ಯ ಸರ್ಕಾರಿ ಸೇವೆಗಳು ಮತ್ತು ರಾಜ್ಯ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆಗೆ ನಿಯಮ ಮಾಡಲು ಸಾಧ್ಯವಿಲ್ಲ ಎಂಬ ವಿಚಾರ ರದ್ದು
– ದೆಹಲಿ ಸರ್ಕಾರದ ಎಲ್ಲಾ ಮಂಡಳಿ, ನಿಗಮಗಳಿಗೆ ಮುಖ್ಯಸ್ಥರನ್ನು ನೇಮಿಸುವ ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಕ್ಕೆ ಕತ್ತರಿ.
– ಸಂಸತ್‌ನಿಂದ ಅಂಗೀಕಾರ ಪಡೆದು ಸ್ಥಾಪನೆಗೊಂಡಿರುವ ಮಂಡಳಿಗಳ ವಿಚಾರದಲ್ಲಿ ಮಾತ್ರ ಅವರು ನೀತಿ- ನಿರ್ದೇಶನ ಮಾಡಲಿದ್ದಾರೆ.

ಆ.8ರಿಂದ ಅವಿಶ್ವಾಸ ಗೊತ್ತುವಳಿ ಚರ್ಚೆ
ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯು ಲೋಕಸಭೆಯಲ್ಲಿ ಆ.8ರಿಂದ 10ರವರೆಗೆ ನಡೆಯಲಿದ್ದು, ಕೊನೆಯ ದಿನ ಸದನದಲ್ಲಿ ಮೋದಿಯವರು ಮಾತನಾಡಲಿದ್ದಾರೆ. ಲೋಕಸಭೆಯ ಉದ್ದಿಮೆ ಸಲಹಾ ಸಮಿತಿ ಮಂಗಳವಾರ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದೆ. ಆದರೆ, ಬುಧವಾರವೇ ಚರ್ಚೆ ಕೈಗೆತ್ತಿಕೊಳ್ಳಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಆದ್ಯತೆ ಮೇರೆಗೆ ಗೊತ್ತುವಳಿಯನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next