Advertisement

ಆರ್‌ಸಿಬಿಯಂತೆ ಬ್ಯಾಟ್‌ ಬೀಸಿದ ಡೆಲ್ಲಿ 67 ಆಲೌಟ್‌!

11:49 AM May 01, 2017 | Team Udayavani |

ಮೊಹಾಲಿ: ರಾಯಲ್‌ ಚಾಲೆಂಜರ್ ಬೆಂಗಳೂರಿಗೆ ಸ್ಪರ್ಧೆ ನೀಡುವಂತೆ ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಡೇರ್‌ಡೆವಿಲ್ಸ್‌ ರವಿವಾರದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ 67 ರನ್ನಿಗೆ ದಿಂಡುರುಳಿದೆ. ಇದರ ಪರಿಣಾಮವೆಂಬಂತೆ, 10 ವಿಕೆಟ್‌ಗಳ ಸೋಲುಂಡು ತಳದಲ್ಲೇ ಉಳಿದಿದೆ.

Advertisement

“ಪಿಸಿಎ ಸ್ಟೇಡಿಯಂ’ನಲ್ಲಿ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಡೇರ್‌ಡೆವಿಲ್ಸ್‌ ಸಂದೀಪ್‌ ಶರ್ಮ ಹಾಗೂ ಇತರರ ದಾಳಿಗೆ ತತ್ತರಿಸಿ 17.1 ಓವರ್‌ಗಳಲ್ಲಿ 67 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಪಂಜಾಬ್‌ 7.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 68 ರನ್‌ ಬಾರಿಸಿ ಸುಲಭ 
ಜಯ ಸಾಧಿಸಿತು.

ಈ ಸಣ್ಣ ಮೊತ್ತದ ಚೇಸಿಂಗ್‌ನಲ್ಲೂ ಪಂಜಾಬ್‌ ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ ಅರ್ಧ ಶತಕ ದಾಖಲಿಸಿದ್ದೊಂದು ವಿಶೇಷ. 27 ಎಸೆತ ಎದುರಿಸಿದ ಅವರು 6 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 50 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಜತೆಗಾರ ಹಾಶಿಮ್‌ ಆಮ್ಲ ಗಳಿಕೆ ಔಟಾಗದೆ 16 ರನ್‌. ಈ ಜಯದೊಂದಿಗೆ 9 ಪಂದ್ಯಗಳಿಂದ ಒಟ್ಟು 8 ಅಂಕ ಗಳಿಸಿದ ಪಂಜಾಬ್‌ನ ಪ್ಲೇ-ಆಫ್ ಸ್ಪರ್ಧೆ ಜೀವಂತವಾಗಿ ಉಳಿದಿದೆ.

ಕರ್ನಾಟಕದವರಿಗೆ ತಟ್ಟಿದ ಬಿಸಿ!
ಡೆಲ್ಲಿಯ ಈ ಹೀನಾಯ ಬ್ಯಾಟಿಂಗ್‌ ನಿರ್ವಹಣೆಯ ಬಿಸಿ ನೇರ ಕರ್ನಾಟಕ ಕ್ರಿಕೆಟಿಗರಿಗೆ ತಟ್ಟಿದ್ದು ಮಾತ್ರ ವಿಪರ್ಯಾಸ. ನಾಯಕ ಜಹೀರ್‌ ಖಾನ್‌ ಗಾಯಾಳಾದ್ದರಿಂದ ಡೆಲ್ಲಿ ನಾಯಕತ್ವವನ್ನು ಕರುಣ್‌ ನಾಯರ್‌ಗೆ ವಹಿಸ ಲಾಗಿತ್ತು. ಟೆಸ್ಟ್‌ ತ್ರಿಶತಕ ಬಾರಿಸಿದ ಬಳಿಕ ಬ್ಯಾಟಿಂಗ್‌ ಫಾರ್ಮನ್ನು ಸಂಪೂರ್ಣ ಕಳೆದುಕೊಂಡಿದ್ದ  ನಾಯರ್‌ ಐಪಿಎಲ್‌ನಲ್ಲೂ ಸತತ ವೈಫ‌ಲ್ಯ ಅನುಭವಿ ಸುತ್ತ ಬಂದಿದ್ದರು. ತಂಡದಿಂದ ಬೇರ್ಪಡುವ ಅಪಾಯದಲ್ಲಿದ್ದಾಗಲೇ ನಾಯರ್‌ಗೆ ನಾಯಕತ್ವ ನೀಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ. 

ಹಾಗೆಯೇ ಡೆಲ್ಲಿ ತಂಡದ ಕೋಚ್‌ ಸ್ಥಾನದಲ್ಲಿರುವವರು “ಗೋಡೆ’ ಖ್ಯಾತಿಯ ರಾಹುಲ್‌ ದ್ರಾವಿಡ್‌. ಭಾರತದ ಕಿರಿಯರ ತಂಡವನ್ನು ವಿಶ್ವ ಮಟ್ಟಕ್ಕೇರಿಸಿದ ದ್ರಾವಿಡ್‌ಗೆ ಡೆಲ್ಲಿ ತಂಡವನ್ನು ಪಳಗಿಸಲಾಗದಿದ್ದುದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. 

Advertisement

ಇದು ಡೆಲ್ಲಿಯ ಕನಿಷ್ಠ ಮೊತ್ತ
67 ರನ್‌ ಎನ್ನುವುದು ಐಪಿಎಲ್‌ ಇತಿಹಾಸದಲ್ಲೇ ಡೆಲ್ಲಿಯ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಹೈದರಾಬಾದ್‌ನಲ್ಲಿ ಆಡಲಾದ 2013ರ ಮುಖಾಮುಖೀಯಲ್ಲಿ 80 ರನ್ನಿಗೆ ಪತನಗೊಂಡಿತ್ತು. ಅಂದು ಮಾಹೇಲ ಜಯವರ್ಧನ ಡೆಲ್ಲಿ ನಾಯಕರಾಗಿದ್ದರು.

ಹಾಗೆಯೇ ಐಪಿಎಲ್‌ನಲ್ಲಿ ಮೊದಲು ಬ್ಯಾಟಿಂಗ್‌ ವೇಳೆ ತಂಡವೊಂದು ಗಳಿಸಿದ ಕನಿಷ್ಠ ಮೊತ್ತದ ಜಂಟಿ ದಾಖಲೆಯೂ ಡೆಲ್ಲಿಯದ್ದಾಯಿತು. 2008ರ ಮುಂಬಯಿ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್‌ ವಿರುದ್ಧ ಕೆಕೆಆರ್‌ ಕೂಡ ಇಷ್ಟೇ ರನ್ನಿಗೆ ಕುಸಿದಿತ್ತು. ಇದು ಗಂಗೂಲಿ-ತೆಂಡುಲ್ಕರ್‌ ತಂಡಗಳ ನಡುವಿನ ಸ್ಪರ್ಧೆಯಾಗಿತ್ತು. ಈ ಪಂದ್ಯವನ್ನು ಮುಂಬೈ 8 ವಿಕೆಟ್‌ಗಳಿಂದ ಜಯಿಸಿತ್ತು.

ಸಂದೀಪ್‌ ಮಾರಕ ದಾಳಿ
ಮೊಹಾಲಿ ಪಿಚ್‌ ಅನ್ನು ಚೆನ್ನಾಗಿ ಬಲ್ಲ ಪಂಜಾಬ್‌ನ ಮಧ್ಯಮ ವೇಗಿ ಸಂದೀಪ್‌ ಶರ್ಮ ಮೊದಲ ಓವರಿನಿಂದಲೇ ಡೆಲ್ಲಿ ವಿಕೆಟ್‌ ಉಡಾಯಿಸತೊಡಗಿದರು. 5 ಓವರ್‌ಗಳೊಳಗಾಗಿ ಅವರು 3 ವಿಕೆಟ್‌ ಉರುಳಿಸಿಯಾಗಿತ್ತು. ಸಂದೀಪ್‌ ಅವರ ಒಟ್ಟು ಸಾಧನೆ 20ಕ್ಕೆ 4 ವಿಕೆಟ್‌. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ. 2 ಕ್ಯಾಚ್‌ ಕೂಡ ಪಡೆದ ಸಂದೀಪ್‌ ಶರ್ಮ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾದರು.  ವರುಣ್‌ ಆರೋನ್‌ 3ಕ್ಕೆ 2 ವಿಕೆಟ್‌, ಅಕ್ಷರ್‌ ಪಟೇಲ್‌ 22ಕ್ಕೆ 2 ವಿಕೆಟ್‌ ಕಿತ್ತು ಡೆಲ್ಲಿಯ ಶೀಘ್ರ ಪತನದಲ್ಲಿ ಮುಖ್ಯ ಪಾತ್ರ ವಹಿಸಿದರು. ಹಿಂದಿನ ರಾತ್ರಿ ಮೊಹಾಲಿಯಲ್ಲಿ ಮಳೆಯಾದದ್ದು ಕೂಡ ಪಂಜಾಬ್‌ ಬೌಲರ್‌ಗಳಿಗೆ ಬಂಪರ್‌ ಆಗಿ ಪರಿಣಮಿಸಿತು.ಡೆಲ್ಲಿ ಸರದಿಯಲ್ಲಿ 18 ರನ್‌ ಗಳಿಸಿದ ಕೋರಿ ಆ್ಯಂಡರ್ಸನ್‌ ಅವರದೇ ಗರಿಷ್ಠ ಗಳಿಕೆ. ನಾಯರ್‌ ಮತ್ತು ರಬಾಡ ತಲಾ 11 ರನ್‌ ಹೊಡೆದರು. ಉಳಿದವರ್ಯಾರೂ ಆರರ ಗಡಿ ದಾಟಲಿಲ್ಲ. ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಸಿಡಿದದ್ದು 3 ಬೌಂಡರಿ, 2 ಸಿಕ್ಸರ್‌ ಮಾತ್ರ.

ಸ್ಕೋರ್‌ ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಸಂಜು ಸ್ಯಾಮ್ಸನ್‌    ಸಿ ಮೋಹಿತ್‌ ಬಿ ಸಂದೀಪ್‌    5
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಸಾಹಾ ಬಿ ಸಂದೀಪ್‌    0
ಕರುಣ್‌ ನಾಯರ್‌    ಬಿ ಪಟೇಲ್‌    11
ಶ್ರೇಯಸ್‌ ಅಯ್ಯರ್‌    ಸಿ ಮತ್ತು ಬಿ ಸಂದೀಪ್‌    6
ರಿಷಬ್‌ ಪಂತ್‌    ಎಲ್‌ಬಿಡಬ್ಲ್ಯು ಮ್ಯಾಕ್ಸ್‌ವೆಲ್‌    3
ಕೋರಿ ಆ್ಯಂಡರ್ಸನ್‌    ಬಿ ಆರೋನ್‌    18
ಕ್ರಿಸ್‌ ಮಾರಿಸ್‌    ಸಿ ಮತ್ತು ಬಿ ಪಟೇಲ್‌    2
ಕ್ಯಾಗಿಸೊ ರಬಾಡ    ಸಿ ಮಾರ್ಷ್‌ ಬಿ ಸಂದೀಪ್‌    11
ಅಮಿತ್‌ ಮಿಶ್ರಾ    ಔಟಾಗದೆ    4
ಮೊಹಮ್ಮದ್‌ ಶಮಿ    ಸಿ ಸಂದೀಪ್‌ ಬಿ ಆರೋನ್‌    2
ಶಾಬಾಜ್‌ ನದೀಂ    ಸಿ ಮತ್ತು ಬಿ ಮೋಹಿತ್‌    0
ಇತರ        5
ಒಟ್ಟು  (17.1 ಓವರ್‌ಗಳಲ್ಲಿ ಆಲೌಟ್‌)    67
ವಿಕೆಟ್‌ ಪತನ: 1-1, 2-7, 3-22, 4-25, 5-30, 6-33, 7-59, 8-62, 9-67.
ಬೌಲಿಂಗ್‌:
ಸಂದೀಪ್‌ ಶರ್ಮ        4-0-20-4
ಟಿ. ನಟರಾಜನ್‌        2-0-7-0
ಮೋಹಿತ್‌ ಶರ್ಮ        1.1-0-3-1
ಅಕ್ಷರ್‌ ಪಟೇಲ್‌        4-0-22-2
ಗ್ಲೆನ್‌ ಮ್ಯಾಕ್ಸ್‌ವೆಲ್‌        4-0-12-1
ವರುಣ್‌ ಆರೋನ್‌        2-0-3-2

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಮಾರ್ಟಿನ್‌ ಗಪ್ಟಿಲ್‌    ಔಟಾಗದೆ    50
ಹಾಶಿಮ್‌ ಆಮ್ಲ    ಔಟಾಗದೆ    16
ಇತರ        2
ಒಟ್ಟು  (7.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ)    68
ಬೌಲಿಂಗ್‌:
ಮೊಹಮ್ಮದ್‌ ಶಮಿ        2-0-19-0
ಕ್ಯಾಗಿಸೊ ರಬಾಡ        2-0-18-0
ಕ್ರಿಸ್‌ ಮಾರಿಸ್‌        2-0-13-0
ಅಮಿತ್‌ ಮಿಶ್ರಾ        1-0-9-0
ಶಾಬಾಜ್‌ ನದೀಂ        0.5-0-9-0

ಪಂದ್ಯಶ್ರೇಷ್ಠ: ಸಂದೀಪ್‌ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next