Advertisement

IPL; ಪಂಜಾಬ್ ವಿರುದ್ಧ ರಾಜಸ್ಥಾನ್ ಗೆ 3 ವಿಕೆಟ್ ಗಳ ರೋಚಕ ಗೆಲುವು

11:15 PM Apr 13, 2024 | Team Udayavani |

ಚಂಡೀಗಢ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮುಲ್ಲನ್ಪುರ್ ನಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

Advertisement

ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಆವೇಶ್‌ ಖಾನ್‌ ಮತ್ತು ಕೇಶವ ಮಹಾರಾಜ್‌ ಅವರ ನಿಖರ ದಾಳಿಯಿಂದಾಗಿ ರನ್‌ ಗಳಿಸಲು ಒದ್ದಾಡಿದ ಪಂಜಾಬ್‌ ಕಿಂಗ್ಸ್‌ ಎಂಟು ವಿಕೆಟಿಗೆ 147 ರನ್‌ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 19.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಜಯಭೇರಿ ಬಾರಿಸಿತು. ಶಿಮ್ರಾನ್ ಹೆಟ್ಮೆಯರ್ ಔಟಾಗದೆ 27 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯಶಸ್ವಿ ಜೈಸ್ವಾಲ್ 39, ತನುಷ್ ಕೋಟ್ಯಾನ್ 24, ನಾಯಕ ಸಂಜು ಸ್ಯಾಮ್ಸನ್ 18, ರಿಯಾನ್ ಪರಾಗ್ 23, ರೋವ್ಮನ್ ಪೊವೆಲ್ 11 ರನ್ ಕೊಡುಗೆ ನೀಡಿದರು.

ಆವೇಶ್‌ ಮತ್ತು ಮಹಾರಾಜ್‌ ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್‌ನಿಂದಾಗಿ ಪಂಜಾಬ್‌ ಆಟಗಾರರು ಪ್ರತಿಯೊಂದು ರನ್‌ ಗಳಿಸಲು ಬಹಳಷ್ಟು ಒದ್ದಾಡಿದರು. ತಂಡದ ಯಾವುದೇ ಆಟಗಾರ ನ್ಪೋಟಕ ಆಟಕ್ಕೆ ಮುಂದಾಗಲು ಸಾಧ್ಯವಾಗಲೇ ಇಲ್ಲ. 31 ರನ್‌ ಗಳಿಸಿದ ಅಶುತೋಷ್‌ ಶರ್ಮ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಅವರು 16 ಎಸೆತ ಎದುರಿಸಿದ್ದು 1 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಅವರನ್ನು ಬಿಟ್ಟರೆ 29 ರನ್‌ ಗಳಿಸಿದ ಜಿತೇಶ್‌ ಶರ್ಮ ಎರಡನೇ ಗರಿಷ್ಠ ಸ್ಕೋರರ್‌ ಆಗಿದ್ದಾರೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್‌ ಉತ್ತಮ ರೀತಿಯಲ್ಲಿ ದಾಳಿ ಸಂಘಟಿಸಿದ್ದು ಪಂಜಾಬ್‌ ರನ್‌ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾಗಿತ್ತು. ಒಟ್ಟಾರೆ ಈ ಪಂದ್ಯದಲ್ಲಿ ಕೇವಲ 9 ಬೌಂಡರಿ ಮತ್ತು ಆರು ಸಿಕ್ಸರ್‌ ದಾಖಲಾಗಿರುವುದು ಇದಕ್ಕೆ ಸಾಕ್ಷಿ.

ಶಿಖರ್‌ ಧವನ್‌ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ಅಥರ್ವ ಟೈಡ್‌, ಜಾನಿ ಬೇರ್‌ಸ್ಟೋ ಮತ್ತು ನಾಯಕ ಸ್ಯಾಮ್‌ ಕರನ್‌ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫ‌ಲರಾದರು. ಇದರಿಂದಾಗಿ ಪಂಜಾಬ್‌ ಪ್ರತಿ ರನ್ನಿ ಗಳಿಸಲು ಒದ್ದಾಡಿತು. ಇದರ ನಡುವೆ ವಿಕೆಟ್‌ ಕಳೆದುಕೊಂಡಿದ್ದರಿಂದ ತಂಡ ಕುಸಿಯತೊಡಗಿತು.

Advertisement

ಕೊನೆ ಹಂತದಲ್ಲಿ ಲಿಯಮ್‌ ಲಿವಿಂಗ್‌ಸ್ಟೋನ್‌ ಮತ್ತು ಅಶುತೋಷ್‌ ಸಿಡಿದ ಕಾರಣ ತಂಡದ ಮೊತ್ತ 147ರ ವರೆಗೆ ತಲುಪಿತು.ಬಿಗು ದಾಳಿ ಸಂಘಟಿಸಿದ ವೇಗಿ ಆವೇಶ್‌ ಖಾನ್‌ ತನ್ನ 4 ಓವರ್‌ಗಳ ದಾಳಿಯಲ್ಲಿ 34 ರನ್ನಿಗೆ ಎರಡು ವಿಕೆಟ್‌ ಪಡೆದರೆ ಕೇಶವ ಮಹಾರಾಜ್‌ ಕೇವಲ 23 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ದಾಳಿ ನಡೆಸಿದ ಬೌಲ್ಟ್, ಕುಲದೀಪ್‌ ಸೆನ್‌ ಮತ್ತು ಚಹಲ್‌ ತಲಾ ಒಂದು ವಿಕೆಟ್‌ ಕಿತ್ತರು.

ಧವನ್‌ಗೆ ವಿಶ್ರಾಂತಿ
ಗಾಯದ ಸಮಸ್ಯೆಯಿಂದಾಗಿ ಶಿಖನ್‌ ಧವನ್‌ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಇಂಗ್ಲೆಂಡಿನ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಧವನ್‌ ಅವರ ಬದಲಿಗೆ ಅಥರ್ವ ಟೈಡ್‌ ಮತ್ತು ಲಿಯಮ್‌ ಲಿವಿಂಗ್‌ಸ್ಟೋನ್‌ ತಂಡಕ್ಕೆ ಮರಳಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಜಾಸ್‌ ಬಟ್ಲರ್‌ ಮತ್ತು ಆರ್‌. ಅಶ್ವಿ‌ನ್‌ ಅವರ ಸೇವೆಯಿಂದ ವಂಚಿತವಾಗಿದ್ದರೆ ಪೊವೆಲ್‌ ಮತ್ತು ತನುಷ್‌ ಕೋಟ್ಯಾನ್‌ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next