Advertisement

ದಿಲ್ಲಿ ಸಿಎಂ ಕೇಜ್ರಿವಾಲ್ ವಿರುದ್ಧ 90 ಮಂದಿ ಸ್ಪರ್ಧೆ

10:05 AM Jan 24, 2020 | Hari Prasad |

ಹೊಸದಿಲ್ಲಿ: ಮುಂದಿನ ತಿಂಗಳ ಎಂಟರಂದು ದಿಲ್ಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಕಳೆಗಟ್ಟಿದೆ. ಹೊಸದಿಲ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಆಮ್‌ ಆದ್ಮಿ ಪಕ್ಷದ ಸಂಚಾಲಕ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ 90 ಮಂದಿ ಹುರಿಯಾಳುಗಳು ಸ್ಪರ್ಧಿಸಿದ್ದಾರೆ. ಈ ಪೈಕಿ ‘ಚಕ್‌ ದೇ ಇಂಡಿಯಾ’ ಸಿನಿಮಾ ಖ್ಯಾತಿಯ ಶೈಲೇಂದ್ರ ಸಿಂಗ್‌ ಶಲ್ಲಿ ಕೂಡ ಪ್ರಸಕ್ತ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ಈಗ “ಅಂಜಾನ್‌ ಆದ್ಮಿ ಪಾರ್ಟಿ’ ಯ ಸದಸ್ಯ ಎಂದು ಹೇಳಿಕೊಂಡಿದ್ದಾರೆ. ಅವರು ‘ಚಕ್‌ ದೇ ಇಂಡಿಯಾ’ ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Advertisement

2009ರಲ್ಲಿ ರಾಷ್ಟ್ರ ರಾಜಧಾನಿಯ ಮಂದಿರ್‌ ಮಾರ್ಗ್‌ ಎಂಬಲ್ಲಿ ಬಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವ ಮೂಲಕ ಸುದ್ದಿ ಯಾಗಿದ್ದರು. ಮಂಗಳವಾರ ಒಟ್ಟು 65 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ರಿಟರ್ನಿಂಗ್‌ ಆಫೀಸರ್‌ ಹೇಳಿದ್ದಾರೆ. ದಿಲ್ಲಿ ಚುನಾವಣೆಗಾಗಿ 1,029 ಮಂದಿ ಅಭ್ಯರ್ಥಿಗಳು 1,528 ನಾಮಪತ್ರಗಳನ್ನು ಸಲ್ಲಿಸಿದ್ದಾರೆಂದು ಚುನಾವಣಾ ಆಯೋಗ ಹೇಳಿದೆ.

ಸ್ಟಾರ್‌ ಪ್ರಚಾರಕರು: ದಿಲ್ಲಿ ಚುನಾವಣೆಗಾಗಿ ಬಿಜೆಪಿ ನಲವತ್ತು ಮಂದಿಯ ಸ್ಟಾರ್‌ ಚುನಾವಣೆ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾಗಿರುವ ಅಮಿತ್‌ ಶಾ, ಸ್ಮತಿ ಇರಾನಿ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌, ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಹೆಸರುಗಳು ಪ್ರಮುಖ ವಾಗಿವೆ.

ಕಾಂಗ್ರೆಸ್‌ ಕೂಡ ತನ್ನ ಸ್ಟಾರ್‌ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಪ್ರಮುಖವಾಗಿರುವ ಹೆಸರೆಂದರೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ನವ್‌ಜೋತ್‌ ಸಿಂಗ್‌ ಸಿಧು, ಮಾಜಿ ಸಂಸದ ಶತ್ರುಘ್ನ ಸಿನ್ಹಾ ಸೇರಿದ್ದಾರೆ.

ಅದ್ದೂರಿ ರೋಡ್‌ ಶೋ: ಮುಖ್ಯಮಂತ್ರಿ ಕೇಜ್ರಿವಾಲ್‌ ತಮ್ಮ ಕ್ಷೇತ್ರಾದ್ಯಂತ ಬುಧವಾರ ರೋಡ್‌ ಶೋ ನಡೆಸಿದರು. ಐದು ವರ್ಷಗಳ ಆಪ್‌ ಸರಕಾರದ ಸಾಧನೆ ಪರಿಗಣಿಸಿ ಮತ್ತು ನಿಮ್ಮ ಕುಟುಂಬದ ಹಿತಾಸಕ್ತಿ ಗಮನಿಸಿ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next