ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿದಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಾಗಿ ವರದಿ ತಿಳಿಸಿದೆ. ಮುಂಡ್ಕಾ ಕ್ಷೇತ್ರದ ಧರ್ಮಪಾಲ್ ಲಾರ್ಕಾ ಸಲ್ಲಿಸಿರುವ ಅಫಿಡವಿತ್ ಪ್ರಕಾರ 292 ಕೋಟಿ ರೂಪಾಯಿ ಆಸ್ತಿ ಒಡೆಯ ಎಂದು ಘೋಷಿಸಿಕೊಂಡಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿತ್ ಪ್ರಕಾರ, ಆಮ್ ಆದ್ಮಿ ಪಕ್ಷದ ಆರ್ ಕೆ ಪುರಂ ಕ್ಷೇತ್ರದ ಪ್ರಮೀಳಾ ಟೋಕಾಸ್ 80 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ವರದಿ ವಿವರಿಸಿದೆ.
ಹರಿನಗರ್ ವಿಧಾನಸಭಾ ಕ್ಷೇತ್ರದ ಹುರಿಯಾಳು ಆಮ್ ಆದ್ಮಿ ಪಕ್ಷದ ರಾಜ್ ಕುಮಾರಿ ಧಿಲ್ಲೋನ್ 51 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ. ರಜೌರಿ ಗಾರ್ಡನ್ ಕ್ಷೇತ್ರದ ಧಾನ್ವತಿ ಚಾಂಡೇಲಾ 55 ಕೋಟಿ ರೂಪಾಯಿ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಲಾರ್ಕಾ ಸ್ಥಿರಾಸ್ತಿಯ ಮೊತ್ತ 3.24 ಕೋಟಿ ರೂಪಾಯಿ ಮತ್ತು ಪತ್ನಿಯ ಬಳಿ ಇರುವ ಮೊತ್ತ 13. 37 ಲಕ್ಷ. ಆಕೆಯ ಚರಾಸ್ತಿ ಮೌಲ್ಯ 243 ಕೋಟಿ ರೂಪಾಯಿ ಸೇರಿ ಒಟ್ಟು ಆಸ್ತಿ ಮೊತ್ತ 292 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಸಿಂಗ್ (ದಿಲ್ಲಿ ಮಾಜಿ ಸ್ಪೀಕರ್ ಯೋಗಾನಂದ್ ಶಾಸ್ತ್ರಿ ಪುತ್ರಿ) ಹಾಗೂ ಪತಿಯ ಆಸ್ತಿ ಒಟ್ಟು ಮೌಲ್ಯ 70 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಪ್ರಿಯಾಂಕಾ ಆರ್ ಕೆ ಪುರಂ ಕ್ಷೇತ್ರದಲ್ಲಿ ಆಪ್ ನ ಟೋಕಾಸ್ ಎದುರು ಸ್ಪರ್ಧೆಗಿಳಿದಿದ್ದಾರೆ.