Advertisement
ಏರ್‌ಪೋರ್ಟ್ ಮೇಲ್ಛಾವಣಿ ಕುಸಿತವು ಮೋದಿ ಸರಕಾರದ ಕಳೆದ 10 ವರ್ಷಗಳ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ದಿಲ್ಲಿ ಏರ್‌ಪೋರ್ಟ್ ಛಾವಣಿ ಕುಸಿತ, ಜಬಲ್ಪುರ ಏರ್‌ಪೋರ್ಟ್ ಛಾವಣಿ ಕುಸಿತ, ಅಯೋಧ್ಯೆಯ ರಸ್ತೆಗಳ ದುಸ್ಥಿತಿ, ರಾಮಮಂದಿರ ಸೋರಿಕೆ, ಮುಂಬಯಿ ಟ್ರಾನ್ಸ್ ಹಾರ್ಬರ್ ಲಿಂಕ್ ರಸ್ತೆಯಲ್ಲಿ ಬಿರುಕು, ಮೋರ್ಬಿ ಸೇತುವೆ ದುರಂತ… ಇದೆಲ್ಲವೂ ಮೋದಿಯವರ “ವಿಶ್ವದರ್ಜೆಯ ಮೂಲಸೌಕರ್ಯ’ದ ಸುಳ್ಳನ್ನು ಬಹಿರಂಗಪಡಿಸಿದೆ. ಮಾ.10ರಂದು ದಿಲ್ಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ಅನ್ನು ಮೋದಿಯೇ ಉದ್ಘಾಟಿಸಿದ್ದರು. ಚುನಾವಣೆಗಾಗಿ ತರಾತುರಿಯಲ್ಲಿ ರಿಬ್ಬನ್ ಕಟ್ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದೆಲ್ಲದರ ಪರಿಣಾಮವನ್ನು ಈಗ ಕಾಣುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ದುರಂತಕ್ಕೆ ಸಾಕ್ಷಿಯಾದ ಟರ್ಮಿನಲ್ ಅನ್ನು ಉದ್ಘಾಟಿಸಿದ್ದು ಮೋದಿಯವರು ಎಂಬ ಕಾಂಗ್ರೆಸ್ ವಾದವನ್ನು ಬಿಜೆಪಿ ಅಲ್ಲಗಳೆದಿದೆ. ಈ ಟರ್ಮಿನಲ್ ನಿರ್ಮಾಣವಾಗಿದ್ದು 2008-09ರಲ್ಲಿ. ಆಗ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಮೋದಿಯವರು ಉದ್ಘಾಟಿಸಿದ್ದು ಟರ್ಮಿನಲ್-1 ಅಲ್ಲ, ಅವರು ಉದ್ಘಾಟಿಸಿದ್ದು ಬೇರೊಂದು ಕಟ್ಟಡವನ್ನು. ಖರ್ಗೆಯವರ ಹೇಳಿಕೆ ತಪ್ಪು ತಿಳಿವಳಿಕೆಯಿಂದ ಕೂಡಿದೆ ಎಂದು ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಹೇಳಿದ್ದಾರೆ.