Advertisement

ಸರಕಾರದ ಮನವೊಲಿಸಲು 14ಕ್ಕೆ ನಿಯೋಗ

12:54 PM Feb 06, 2022 | Team Udayavani |

ಸಿಂಧನೂರು: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿದ್ದ ತಾಯಿ-ಮಕ್ಕಳ ಆಸ್ಪತ್ರೆ ವಿವಾದ ಕೊನೆಗೂ ತಾರ್ಕಿಕ ತಿರುವು ಪಡೆದಿದೆ.

Advertisement

ಆಸ್ಪತ್ರೆಯನ್ನು ಸಿಂಧನೂರಿನಲ್ಲೇ ನಿರ್ಮಿಸಬೇಕೆಂಬ ಹಿನ್ನೆಲೆಯಲ್ಲಿ ಫೆ.14ರಂದು ಬೆಂಗಳೂರಿಗೆ ಪಕ್ಷಾತೀತ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ. ನಗರದ ತಹಶೀಲ್‌ ಕಚೇರಿಯಲ್ಲಿ ಶಾಸಕ ವೆಂಕಟರಾವ್‌ ನಾಡಗೌಡ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ನಗರ ಪ್ರದೇಶದಲ್ಲಿ ಜಾಗ ಸಿಗದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಬೇರೆ ಕಡೆಗೆ ನಿರ್ಮಿಸಲಾಗುತ್ತಿದೆ ಎಂಬ ಕುರಿತು ಮಾಹಿತಿಯನ್ನು ಒದಗಿಸಿದ್ದ ಶಾಸಕರು, ಯಾರಾದರೂ ಜಾಗ ತೋರಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದರು. ಜೊತೆಗೆ, ತಾವೇ ಇಂದು ಸರ್ವಪಕ್ಷ ಸಭೆಯನ್ನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ನಡೆದ ಚರ್ಚೆಗಳು ಫಲಪ್ರದವಾಗಿ, ಬೆಂಗಳೂರಿಗೆ ನಿಯೋಗ ತೆರಳಲು ನಿರ್ಣಯಿಸಲಾಗಿದೆ.

ನಿಯೋಗ ಹೋಗಲು ಸಜ್ಜು

ಯಾವುದೇ ಬೇರೆ ಇಲಾಖೆಯ ಜಾಗವನ್ನು ಮತ್ತೊಂದು ಇಲಾಖೆಯ ಉದ್ದೇಶಕ್ಕೆ ಪಡೆದುಕೊಳ್ಳುವುದು ಕಷ್ಟವೆಂದು ಗೊತ್ತಾದ ಹಿನ್ನೆಲೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು, ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ನೀರಾವರಿ ಇಲಾಖೆಗೆ ಸೇರಿದ 29 ಎಕರೆ ಅಂದಾಜು ಜಾಗವಿದೆ. ಇದರಲ್ಲಿ ಇಲಾಖೆ ಕಟ್ಟಡ, ವಸತಿ ಗೃಹ, ಪೊಲೀಸ್‌ ಠಾಣೆ ಕಟ್ಟಡ ಹೊರತುಪಡಿಸಿ ಉಳಿದ ಜಾಗವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಳಸಿಕೊಳ್ಳಲು ಅವಕಾಶವಿದೆ ಎಂಬ ಸಲಹೆ ನೀಡಿದರು. ಇದರಿಂದ ಪ್ರೇರೇಪಿತರಾದ ಶಾಸಕರು, ಒಂದು ಇಲಾಖೆಯ ಜಾಗ ಮತ್ತೊಂದು ಇಲಾಖೆಗೆ ವರ್ಗಾಯಿಸಲು ಸರಕಾರದ ಮಟ್ಟದಲ್ಲಿ ನಿರ್ಣಯ ಆಗಬೇಕು. ಇದಕ್ಕಾಗಿ ಸರಕಾರದ ಹಂತದಲ್ಲಿ ಪ್ರಯತ್ನಿಸಲು ಪಕ್ಷಾತೀತ ನಿಯೋಗ ಕೊಂಡೊಯ್ಯುವ ಭರವಸೆ ನೀಡಿದರು.

Advertisement

ಸ್ಮಶಾನದಲ್ಲಿ ನಿರ್ಮಾಣ ಬೇಡ

ಈ ನಡುವೆ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಸ್ಮಶಾನದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸುವುದು ಬೇಡ ಎಂದು ತೀವ್ರವಾಗಿ ವಿರೋಧಿಸಿದರು. ಒಂದು ಹಂತದಲ್ಲಿ ಶಾಸಕರು ಅವರ ಮಧ್ಯೆ ಮಾತಿನ ಜಟಾಪಟಿ ಏರ್ಪಟ್ಟಿತು. ದೇವಸ್ಥಾನ, ಮಸೀದಿ ಮಂದಿರಗಳು, ಊರುಗಳೇ ತಲೆ ಎತ್ತಿವೆ. ಆ ವಿಚಾರ ಬೇಡ ಎಂದರು. ಆದರೆ, ಪಟ್ಟು ಬಿಡದ ‌ ಬಸನಗೌಡ ಬಾದರ್ಲಿ, ಅಲ್ಲಿ ಪಂಚಾಯತ್‌ ಮೂಲಕವೇ ಸ್ಮಶಾನ ಅಭಿವೃದ್ಧಿಪಡಿಸಿದ ದಾಖಲೆ ಕೊಡುತ್ತೇನೆ ಎಂದಾಗ, ಶಾಸಕರು ತಬ್ಬಿಬ್ಟಾದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಮಧ್ಯಸ್ಥಿಕೆವಹಿಸಿ, ಈ ವಿಚಾರ ಕೈ ಬಿಡಿ. ಜಾಗವನ್ನು ಪಡೆಯುವ ನಿಟ್ಟಿನಲ್ಲಿ ಯೋಚಿಸಿ ಎಂದು ಹೊಸ ಮಾರ್ಗ ಸೂಚಿಸಿದರು. ಆದರೆ, ಸರಕಾರ ಒಪ್ಪದೇ ಇದ್ದಲ್ಲಿ ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಿಸುವುದಾಗಿ ಶಾಸಕ ನಾಡಗೌಡರು ಸ್ಪಷ್ಟಪಡಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮೇಶ ಸಾಲಗುಂದಾ, ತಹಶೀಲ್ದಾರ್‌ ಮಂಜುನಾಥ ಭೋಗಾವತಿ, ವೆಂಕಟೇಶ ರಾಗಲಪರ್ವಿ, ರಾಮನಗೌಡ ವಕೀಲ, ಶರಣಗೌಡ ಗದ್ರಟಗಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next