ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಡಿ.6ರಿಂದ ಮೀನು ಪೂರೈಕೆ ಪುನಾರಂಭಗೊಂಡಿದೆ. ಕರ್ನಾಟಕದಿಂದ 9 ಟ್ರಕ್ ಮೀನುಗಳು ಗೋವಾ ಮಾರುಕಟ್ಟೆಗೆ ಬಂದಿಳಿದಿವೆ. ಈ ಎಲ್ಲ ಟ್ರಕ್‌ಗಳಿಗೂ ಎಫ್‌ಡಿಎ ಪರವಾನಗಿ ಪಡೆದುಕೊಂಡು ಇನ್ಸುಲೇಟೆಡ್ ವಾಹನಗಳ ಮೂಲಕ ಕಳುಹಿಸಲಾಗಿದೆ. ಈ ಮೂಲಕ ಕಳೆದ ಹಲವು ತಿಂಗಳಿಂದ ಉಂಟಾಗಿದ್ದ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ.
ಈ ಕುರಿತು ಗೋವಾ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಮಾತನಾಡಿ, ಗೋವಾ ಸರ್ಕಾರದ ಎಫ್‌ಡಿಎ ಕಾಯ್ದೆಯಡಿ ಯಾವ ಸೂಚನೆ ಜಾರಿಗೊಳಿಸಲಾಗಿತ್ತೋ ಆ ಎಲ್ಲ ಮೀನು ಪೂರೈಸುವ ವಾಹನಗಳಿಗೆ ಗೋವಾಕ್ಕೆ ಪ್ರವೇಶಾವಕಾಶ ಲಭಿಸಲಿದೆ. ಕರ್ನಾಟಕದಿಂದ ಗೋವಾಕ್ಕೆ ಮೀನು ತುಂಬಿಕೊಂಡು ಬರುತ್ತಿದ್ದ ವಾಹನಗಳನ್ನು ಗಡಿ ಭಾಗದ ಆರ್‌ಟಿಒ ಹಾಗೂ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆದರೆ ಅವರಿಗೆ ಆಕ್ಷೇಪಾರ್ಹ ಯಾವುದೇ ಸಂಗತಿಗಳು ಕಂಡು ಬಂದಿಲ್ಲ ಎಂದರು.
ಕಳೆದ ಅನೇಕ ದಿನಗಳಿಂದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಇತರ ಭಾಗಗಳಿಂದ ಗೋವಾಕ್ಕೆ ಮೀನು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಗೋವಾದಿಂದಲೂ ಹೊರ ರಾಜ್ಯಕ್ಕೆ ಮೀನು ಪೂರೈಕೆ ಸ್ಥಗಿತಗೊಂಡಿತ್ತು. ಕರ್ನಾಟಕದಿಂದ ಪ್ರತಿದಿನ 80ರಿಂದ 90 ಟ್ರಕ್ ಮೀನು ಗೋವಾಕ್ಕೆ ಬರುತ್ತಿತ್ತು. ಆದರೆ ಗೋವಾ ಸರ್ಕಾರದ ಕೆಲ ನಿರ್ಬಂಧದಿಂದಾಗಿ ಗುರುವಾರ 9 ಟ್ರಕ್ ಮೀನುಗಳು ಗೋವಾ ಪ್ರವೇಶಿಸಲು ಸಾಧ್ಯವಾಗಿದೆ. ಬರುವ ಸೋಮವಾರ ಗೋವಾ ಎಫ್‌ಡಿಎ ಬೈಠಕ್ ನಡೆಯಲಿದ್ದು ಅದರಲ್ಲಿ ಸಿಂಧದುರ್ಗ ಹಾಗೂ ಕಾರವಾರದ ಮೀನುಗಳಿಗೆ ಸಂಬಂಧಿ ಸಿದಂತೆ ಕೆಲ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ನ್ಯಾಯಾಲಯದ ಆದೇಶ: ಈತನ್ಮಧ್ಯೆ ಫಾರ್ಮೊಲಿನ್ ಪ್ರಕರಣಕ್ಕೆ ಸಂಬಂಧಿ ಸಿದಂತೆ ಯಾವುದಾದರೊಂದು ವಿಶ್ವವಿದ್ಯಾಲಯದ ಸಂಶೋಧಕರ ಸಹಕಾರ ಪಡೆಯುವಂತೆ ಮುಂಬೈ ಹೈಕೋರ್ಟ್‌ನ ಗೋವಾ ಖಂಡ ಪೀಠವು ಗೋವಾ ಸರ್ಕಾರಕ್ಕೆ ಸೂಚಿಸಿದೆ. ಈ ಪ್ರಕರಣದ ಎಲ್ಲ ಅರ್ಜಿಗಳನ್ನು ಹಾಗೂ ಸರ್ಕಾರಿ ಏಜೆನ್ಸಿಗಳಿಂದ ಸಲ್ಲಿಸಲಾಗಿದ್ದ ಕಾಗದ ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಖಂಡಪೀಠವು ಸ್ಪಷ್ಟಪಡಿಸಿದೆ.
ಮೀನುಗಳಲ್ಲಿ ನೈಸರ್ಗಿಕವಾಗಿ ಎಷ್ಟು ಪ್ರಮಾಣದಲ್ಲಿ ಫಾರ್ಮೊಲಿನ್ ಅಂಶವಿರುತ್ತದೆ ಹಾಗೂ ಅದರ ಪರಿಣಾಮಗಳ ಕುರಿತಂತೆ ಎಲ್ಲ ಮಾಹಿತಿಗಳನ್ನೂ ವಿಶ್ವವಿದ್ಯಾಲಯದ ಸಂಶೋಧಕರಿಂದ ಖಚಿತಪಡಿಸಿಕೊಳ್ಳಬೇಕು. ಮಹಾರಾಷ್ಟ್ರದ ವಿಶ್ವವಿದ್ಯಾಲಯದ ಬಳಿ ಸಹಾಯ ಪಡೆಯಬಹುದಾಗಿದೆ ಎಂದು ಮುಂಬೈ ಹೈಕೋರ್ಟ್‌ನ ಗೋವಾ ಖಂಡಪೀಠದ ನ್ಯಾ| ಪೃಥ್ವಿರಾಜ್ ಚೌಹಾಣ್ ಹಾಗೂ ಆರ್.ಎಂ ಬೋರ್ಡೆ ಗೋವಾ ಸರ್ಕಾರಕ್ಕೆ ಸೂಚಿಸಿದ್ದಾರೆ.