Advertisement
ನೀಟ್ ರ್‍ಯಾಂಕ್ ಆಧಾರದಲ್ಲಿ ಸೀಟು ಲಭ್ಯವಾಗದೇ ಇದ್ದರೆ, ಸಿಇಟಿ ರ್‍ಯಾಂಕ್ ಆಧಾರದಲ್ಲೇ ಎಂಜಿನಿಯರಿಂಗ್ ಅಥವಾ ಭಾರತೀಯ ವೈದ್ಯ ಪದ್ಧತಿಯ ಕೋರ್ಸ್ ಸೇರಬಹುದೆಂದು ಆಶಾಭಾವನೆ ಹೊಂದಿದ್ದ ವಿದ್ಯಾರ್ಥಿಗಳಿಗೂ ನಿರಾಸೆಯಾಗಿದೆ. ವೈದ್ಯಕೀಯ ಕೋರ್ಸ್‌ನ ಮೊದಲ ಹಂತದ ಸೀಟು ಹಂಚಿಕೆ ಅನಂತರ ಎಂಜಿನಿಯರಿಂಗ್ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಬೇಕು ಎಂದು ಹಲವು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದರು. ಆದರೆ, ಕೆಇಎ ಇದಕ್ಕೆ ಅವಕಾಶ ನೀಡಿಲ್ಲ. ಎಂಜಿನಿಯರಿಂಗ್ 2ನೇ ಸುತ್ತಿನ ಸೀಟು ಹಂಚಿಕೆ ಮುಗಿದೆ. ಎಂಜಿನಿಯರಿಂಗ್ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರು ವೈದ್ಯಕೀಯ ಕೋರ್ಸ್‌ಗೆ ನೀಟ್ ಅಡಿಯಲ್ಲಿ ಸೀಟು ಪಡೆದು, ಎಂಜಿನಿಯರಿಂಗ್ ಸೀಟನ್ನು ಕೆಇಎಗೆ ಒಪ್ಪಿಸುವ ಸಾಧ್ಯತೆ ಇದೆ. ಉಳಿಕೆಯಾಗಿರುವ ಎಲ್ಲ ಸೀಟುಗಳನ್ನು ಎಂಜಿನಿಯರಿಂಗ್ 2ನೇ ಮುಂದುವರಿದ ಸುತ್ತಿನಲ್ಲಿ ಹಂಚಿಕೆ ಮಾಡುವುದಕ್ಕೆ ಪ್ರಾಧಿಕಾರ ನಿರ್ಧರಿಸಿದೆ.
ಪ್ರಸಕ್ತ ಸಾಲಿನಿಂದಲೇ ವೈದ್ಯಕೀಯ ಶಿಕ್ಷಣದ ಪ್ರವೇಶ ಶುಲ್ಕ ಶೇ. 10ರಷ್ಟು ಏರಿಸಲು ಸರಕಾರ ನಿರ್ಧರಿಸಿದ್ದು, ಶುಲ್ಕದ ವಿವರವನ್ನು ಇನ್ನೂ ಪ್ರಾಧಿಕಾರಕ್ಕೆ ನೀಡಿಲ್ಲ. ಶೇ. 10ರಷ್ಟು ಹೆಚ್ಚಳದಿಂದ ಈ ವರ್ಷ ಸರಕಾರಿ ಕಾಲೇಜು ಪ್ರವೇಶ ಶುಲ್ಕ 77 ಸಾವಿರ ರೂ. ಹಾಗೂ ಖಾಸಗಿ ಸೀಟಿಗೆ 6.35 ಲಕ್ಷ ರೂ. ಶುಲ್ಕವಾಗಲಿದೆ. ಸರಕಾರಿ ವೈದ್ಯಕೀಯ ಕಾಲೇಜಿನ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 16,000 ರೂ. ಶುಲ್ಕ ಇರಲಿದೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಇನ್ನೂ ಪ್ರಾಧಿಕಾರಕ್ಕೆ ಸಿಕ್ಕಿಲ್ಲ. ಹಾಗೆಯೇ ಈ ಬಾರಿ ರಾಜ್ಯದಲ್ಲಿ ಆರು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು 100ರಿಂದ 150ಕ್ಕೆ ಹಾಗೂ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ 150ರಿಂದ 200ಕ್ಕೆ ಏರಿಸಲಾಗಿದೆ. ಇದರಿಂದ ಹೆಚ್ಚುವರಿ 350 ಸರಕಾರಿ ಸೀಟುಗಳು ಲಭ್ಯವಾಗಿವೆ.