ಮದ್ದೂರು: ಹೆದ್ದಾರಿ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ಕ್ರಮ ವಹಿಸದ ದಿಲೀಪ್ ಬಿಲ್ಡ್ ಕಾನ್ ಕಂಪನಿ ವಿರುದ್ಧ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು, ದಿಲೀಪ್ ಬಿಲ್ಡ್ ಕಾನ್ ಕಂಪನಿ ವಿರುದ್ಧ ಘೋಷಣೆ ಕೂಗಿ ಹೆದ್ದಾರಿಗೆ ಅಡ್ಡಲಾಗಿ ಆಟೋ ನಿಲ್ಲಿಸುವ ಮೂಲಕ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕಳೆದ 6 ತಿಂಗಳಿಂದಲೂ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದ ಬಳಿ ಯುಜಿಡಿ ಸಂಪರ್ಕದ ತ್ಯಾಜ್ಯ ನೀರು ಮತ್ತಿತರ ಮಲೀನ ನೀರು ರಸ್ತೆಯಲ್ಲೇ ಹರಿಯು ತ್ತಿದ್ದರೂ ಹೆದ್ದಾರಿ ಅಧಿಕಾರಿಗಳು ಕ್ರಮ ವಹಿಸಿಲ್ಲ. ಬಸ್‌ನಿಲ್ದಾಣದ ಸುತ್ತಮುತ್ತ ಅಶುಚಿತ್ವ ತಾಂಡವವಾಡುತ್ತಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿರುವುದಾಗಿ ಆರೋಪಿಸಿದರು.
ಹೊರ-ಒಳ ಬರುವ ಸ್ಥಳಗಳಲ್ಲಿ ಮತ್ತು ಒಂದು ಕಿ.ಮೀ.ನಷ್ಟು ರಸ್ತೆಯಲ್ಲೇ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಮತ್ತು ದಾರಿಯುದ್ದಕ್ಕೂ ಸಂಚರಿಸುವ ಪಾದಚಾರಿಗಳಿಗೆ ತ್ಯಾಜ್ಯ ನೀರು ಪ್ರೋಕ್ಷಣೆಯಾಗುತ್ತಿದೆ ಎಂದು ದೂರಿದರು.
ಎಚ್ಚರಿಕೆ: ಬಸ್‌ನಿಲ್ದಾಣಕ್ಕೆ ಪ್ರತಿನಿತ್ಯ ವಿವಿಧೆಡೆ ಗಳಿಂದ ಆಗಮಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು, ಮೂಗು ಮುಚ್ಚಿ ಕೊಂಡೇ ಸಂಚರಿಸಬೇಕಾದ ಅನಿವಾ ರ್ಯತೆ ಬಂದೊದಗಿದೆ. ಇನ್ನು ರಸ್ತೆಯುದ್ದಕ್ಕೂ ಇರುವ ಗುಂಡಿಗಳಿಗೆ ಕೆಲ ವ್ಯಕ್ತಿಗಳು ಬಿದ್ದು ಗಾಯಗೊಂಡಿರುವ ಜತೆಗೆ ಸಾವನಪ್ಪಿರುವ ಉದಾಹರಣೆ ಸಾಕಷ್ಟಿವೆ. ಕೂಡಲೇ ವಾರದೊಳಗಾಗಿ ಚರಂಡಿ ವ್ಯವಸ್ಥೆ ಕಲ್ಪಿಸಿ ತ್ಯಾಜ್ಯ ನೀರು ಸುಗಮವಾಗಿ ಹರಿಯಲು ಅವಕಾಶ ಕಲ್ಪಿಸದಿದ್ದಲ್ಲಿ ನಿರಂತರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಪುರಸಭೆ ಸದಸ್ಯ ಮ.ನ.ಪ್ರಸನ್ನ ಕುಮಾರ್, ಪದಾಧಿಕಾರಿಗಳಾದ ಸಂದೀಪ್, ಮನು, ಜೋಸೆಫ್, ಮಣಿಕಂಠ, ಕುಮಾರ್, ಶಂಕರ್, ವೆಂಕಟೇಶ್, ಶಿವು, ಸುರೇಶ್, ಮಲ್ಲೇಶ್, ಪುನೀತ್, ಚಂದ್ರು, ಉಮೇಶ್, ಭೂಸ್ವಾಮಿ, ರಮೇಶ್, ರಾಮು, ಧರ್ಮ, ನಂದೀಶ್, ಸಿದ್ದಪ್ಪ ನೇತೃತ್ವ ವಹಿಸಿದ್ದರು.