ಕಾಳಗಿ: ಪಟ್ಟಣದ ಮುತ್ಯಾನಕಟ್ಟಿ ಹತ್ತಿರವಿರುವ ಹಿರೇಮಠ ಹಳ್ಳದ ಮುಖ್ಯ ರಸ್ತೆಯ ಚರಂಡಿ ಹಾಗೂ ಸಿಡಿ ನಿರ್ಮಾಣ ಕಾಮಗಾರಿ ವಿಳಂಬದಿಂದ ಜನರು ಪರದಾಡುವಂತೆ ಆಗಿದೆ.
ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಮುತ್ಯಾನಕಟ್ಟಿ ಹತ್ತಿರ ಹಾಗೂ ಹಿರೇಮಠದ ಹಳ್ಳದ ರಸ್ತೆಯಲ್ಲಿ ಚರಂಡಿ, ಸಿಡಿ ಕಾಮಗಾರಿ ನಿರ್ಮಾಣಕ್ಕೆ ತಗ್ಗು, ಗುಂಡಿ ತೋಡಿ ತಿಂಗಳು ಕಳೆಯುತ್ತಿದ್ದರೂ ಗುತ್ತಿಗೆದಾರರು ಮಾತ್ರ ಕಾಮಗಾರಿ ಪೂರ್ಣಗೊಳಿಸದೇ ಹಾಗೇ ಬಿಟ್ಟಿದ್ದರಿಂದ ಈ ರಸ್ತೆಯಲ್ಲಿ ಪಾದಚಾರಿ ಮೂಲಕ ಸಂಚರಿಸುವ ಅಂಗನವಾಡಿ ಹಾಗೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆಯಲ್ಲಿ ಚರಂಡಿ ದಾಟಿ ಹೋಗುವಾಗ ಅಂಗನವಾಡಿ ಹಾಗೂ ಶಾಲೆ ವಿದ್ಯಾರ್ಥಿಗಳು ಆಯತಪ್ಪಿ ಗುಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆಂದು ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುತ್ಯಾನಕಟ್ಟಿ ಸಿಸಿ ರಸ್ತೆಯ ಚರಂಡಿ ಸಿಡಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಎಂಟರಿಂದ ಹತ್ತು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ವಾಹನ-ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.
-ವೆಂಕಟೇಶ ತೇಲಂಗ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ
ಕಾಳಗಿ ಪಟ್ಟಣದಲ್ಲಿ ಚರಂಡಿ, ಸಿಡಿ ನಿರ್ಮಾಣಕ್ಕೆ ತಿಂಗಳ ಹಿಂದೆ ತಗ್ಗು ತೋಡಿ, ಅರ್ಧಕ್ಕೆ ಬಿಟ್ಟಿದ್ದರಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಪರದಾಡುವಂತಾಗಿದೆ.
-ಸಿದ್ರಾಮ ಪಾಟೀಲ, ಪಟ್ಟಣದ ನಿವಾಸಿ