Advertisement

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

11:39 PM May 15, 2024 | Team Udayavani |

ಮಂಗಳೂರು: ಕೃಷಿಕರಿಗೆ ಸರಕಾರದಿಂದ ಸವಲತ್ತುಗಳು ನೇರವಾಗಿ ಸಿಗುವಂತಾಗಲು ಪಹಣಿ ಪತ್ರಿಕೆ ಮತ್ತು ಆಧಾರ್‌ ಸಂಖ್ಯೆಗಳನ್ನು ಜೋಡಿಸುವ ಕಾರ್ಯ ಫೆಬ್ರವರಿಯಲ್ಲೇ ಆರಂಭವಾಗಿದ್ದರೂ ಕರಾವಳಿ ಜಿಲ್ಲೆಗಳು ಹಿಂದುಳಿದಿವೆ.

Advertisement

ದ.ಕ.ದಲ್ಲಿ ಆಧಾರ್‌ ಲಿಂಕ್‌ ಆಗಬೇಕಿರುವ ಭೂಮಾಲಕರ ಸಂಖ್ಯೆ 28,55,372 ಇದ್ದು ಸುಮಾರು 2,01,313 ಮಂದಿ ಮಾತ್ರ ಆಧಾರ್‌ ಸೀಡಿಂಗ್‌ ಮಾಡಿಸಿಕೊಂಡಿದ್ದಾರೆ. ಶೇ. 7.05ರಷ್ಟು ಮಾತ್ರವೇ ಪ್ರಗತಿಯಾಗಿದೆ. ಉಡುಪಿಯಲ್ಲಿ 28,11,423 ಮಂದಿಯ ಪಹಣಿ-ಆಧಾರ್‌ ಲಿಂಕ್‌ ಆಗಬೇಕಿದ್ದು, 2,06,663 (ಶೇ. 7.35) ಮಾತ್ರ ಲಿಂಕ್‌ ಆಗಿದೆ.

ಆಧಾರ್‌-ಪಹಣಿ ಜೋಡಣೆ ಇದುವರೆಗೆ ಕಡ್ಡಾಯ ಎಂದಿಲ್ಲವಾದರೂ ಆದಷ್ಟು ಬೇಗ ಶೇ. 100 ಪೂರ್ಣಗೊಳಿಸಬೇಕು ಎಂಬ ಸೂಚನೆಯನ್ನು ಕಂದಾಯ ಸಚಿವರು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಕಡ್ಡಾಯವಲ್ಲ ಎನ್ನುವ ಕಾರಣಕ್ಕೆ ರೈತರು ಕೊಡಬೇಕಾದ ಪಹಣಿ ದಾಖಲೆಗಳನ್ನು ನೀಡುತ್ತಿಲ್ಲ. ಹಾಗಾಗಿ ಸೀಡಿಂಗ್‌ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.

ಇನ್ನಷ್ಟು ಕಾರಣಗಳು
ಮುಖ್ಯವಾಗಿ ಹಿಂದಿನಿಂದಲೇ ಕೃಷಿಕರಿಗೆ ಫ್ರೂಟ್ಸ್‌ ಐಡಿ ನೀಡಲಾಗುತ್ತಿದೆ. ಹಿಂದೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಇಲಾಖೆ, ಗ್ರಾಮ ಒನ್‌ ಮುಂತಾದೆಡೆ ಫ್ರೂಟ್ಸ್‌ ಐಡಿ ಮಾಡುತ್ತಿದ್ದರು. ಆಗ ಪಹಣಿ, ಆಧಾರ್‌, ಬ್ಯಾಂಕ್‌ ಖಾತೆ ಪಡೆಯಲಾಗುತ್ತಿತ್ತು. ಆಗ ಹೆಚ್ಚಿನವರು ತಮ್ಮ ಒಂದೋ ಎರಡೋ ಪಹಣಿ ಕೊಟ್ಟರೆ ಸಾಕಿತ್ತು. ಸಾಮಾನ್ಯವಾಗಿ ಕರಾವಳಿಯಲ್ಲಿ ಸರಾಸರಿ ಒಬ್ಬ ಕೃಷಿಕನಿಗೆ 10-15 ಸರ್ವೇ ನಂಬರ್‌ ಇರುತ್ತದೆ. ಈ ಎಲ್ಲ ಪಹಣಿಗಳನ್ನೂ ಈಗ ಪತ್ತೆ ಮಾಡಿ ಮತ್ತೆ ಲಿಂಕ್‌ ಮಾಡುವುದು ಸವಾಲೇ ಸರಿ.

ಇನ್ನೊಂದು ಸಮಸ್ಯೆ ಎಂದರೆ ಹಿಂದೆ ಯಾವ ಇಲಾಖೆಯಲ್ಲಿ ರೈತರು ಫ್ರೂಟ್ಸ್‌ಗೆ ನೋಂದಣಿ ಮಾಡಿರುತ್ತಾರೋ ಈಗ ಅವರು ಹೆಚ್ಚುವರಿ ಪಹಣಿ ಸೇರ್ಪಡೆಗೆ ಇನ್ನೊಂದು ಇಲಾಖೆಯಲ್ಲಿ ಅರ್ಜಿ ಹಾಕಿದರೆ ಅದು ನೋಂದಣಿಯಾದ ಇಲಾಖೆಗೇ ತಿರುಗಿ ಬರುತ್ತದೆ. ಅಲ್ಲಿ ಅನುಮೋದನೆಯಾಗ ಬೇಕು, ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ.

Advertisement

ಇನ್ನು ಕೆಲವು ಭೂಮಾಲಕರು ಮೃತಪಟ್ಟಿದ್ದಾರೆ ಅಥವಾ ಭೂ ಮಾಲಕರು ಎಲ್ಲೋ ದೂರವಿದ್ದಾಗ, ಅವರಿಂದ/ಕುಟುಂಬದವರಿಂದ ದಾಖಲೆ ತರಿಸಿಕೊಳ್ಳುವುದು ಕ್ಲಿಷ್ಟಕರವಾಗುತ್ತಿದೆ. ಆಧಾರ್‌ ದೃಢೀಕರಣ ದಲ್ಲೂ ಸಮಸ್ಯೆಯಾಗುತ್ತಿದೆ.

ಸಾಲ ಬೇಕಾದವರು
ಮಾಡಿಸುತ್ತಾರೆ!
ಸಾಮಾನ್ಯವಾಗಿ ಕೃಷಿ ಸಾಲ ಬೇಕಾದವರು ತಮ್ಮ ಎಲ್ಲ ಪಹಣಿಗಳನ್ನೂ ಆಧಾರ್‌ ಜತೆ ಲಿಂಕ್‌ ಮಾಡಿಸುತ್ತಾರೆ. ಆಗ ಹೆಚ್ಚಿನ ಸಾಲ ಪಡೆಯಲು ಸಾಧ್ಯವಾಗುತ್ತದೆ. ಪ್ರಯೋಜನವಿದ್ದಾಗ ಮಾತ್ರ ಕೃಷಿಕರು ಇಂತಹ ಸೀಡಿಂಗ್‌ ಪ್ರಕ್ರಿಯೆಯತ್ತ ಬರುತ್ತಾರೆ ಹೊರತು ಇಲ್ಲವಾದರೆ ಕಚೇರಿಗಳಿಗೆ ಬರುವುದೇ ಇಲ್ಲ. ಹಾಗಾಗಿ ಫ್ರೂಟ್ಸ್‌ ಐಡಿ ಹೊಂದಿರುವ ಕೃಷಿಕರಲ್ಲಿ ಬಹುತೇಕ ಮಂದಿಯ ಒಂದೋ ಎರಡೋ ಪಹಣಿ ಮಾತ್ರವೇ ಆಧಾರ್‌ಗೆ ಲಿಂಕ್‌ ಆಗಿದೆ, ಉಳಿದ ಹಲವು ಪಹಣಿಗಳು ಬಾಕಿ ಇವೆ. ಹಿಂದೆ ಕಿಸಾನ್‌ ಸಮ್ಮಾನ್‌ ಹಣ ಪಡೆಯಲು ಕೂಡ ಒಂದೇ ಪಹಣಿ ಇದ್ದರೆ ಸಾಕಿತ್ತು. ಈಗ ಇಲಾಖೆಯವರು ನೋಂದಣಿ ಮಾಡುವಾಗಲೇ ಎಲ್ಲ ಪಹಣಿಗಳನ್ನೂ ಪಡೆದು ಕೊಳ್ಳುತ್ತಾರೆ.

ಆಧಾರ್‌-ಪಹಣಿ ಜೋಡಣೆ ಎಲ್ಲಿ?
ರೈತರು ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಆಧಾರ್‌ ಸೀಡಿಂಗ್‌ ಮಾಡಿಸಬಹುದು. ಅಥವಾ ವೆಬ್‌ಸೈಟ್‌ (https://landrecords.karnataka.gov.in/service4/) ನಲ್ಲೂ ಮಾಡಬಹುದು.

ಕೃಷಿಕರು ಎಲ್ಲ ಪಹಣಿಗಳನ್ನೂ ಆಧಾರ್‌ ಜತೆ ಮಾಡಿಸಬೇಕು, ಯಾಕೆಂದರೆ ಬೆಳೆಹಾನಿಯಾದಾಗ ಪೂರ್ತಿ ಪರಿಹಾರ ನೇರ ಪಾವತಿಯಾಗಬೇಕಾದರೆ ಇದು ಅಗತ್ಯ. ಬೆಳೆವಿಮೆಗೆ, ಬೆಳೆಸಾಲಕ್ಕೆ, ಸಹಾಯ ಧನ ನೀಡುವುದಕ್ಕೆ ಇದು ಅತ್ಯಗತ್ಯ. ಇದನ್ನು ರೈತರು ಮನಗಂಡು ಆದಷ್ಟೂ ಪಹಣಿ-ಆಧಾರ್‌ ಸೀಡಿಂಗ್‌ ಮಾಡಿಸುವುದು ಉತ್ತಮ
– ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next