Advertisement

ಅಂಚೆ ಕಚೇರಿಗಳಲ್ಲಿ “ವಿಳಂಬ ಭಾಗ್ಯ’

05:10 PM May 07, 2019 | Team Udayavani |

ಕುಂದಾಪುರ: ತ್ವರಿತ, ಪಾರದರ್ಶಕ ಮತ್ತು ನಿಖರ ಸೇವೆಗಾಗಿ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಆರಂಭಿಸಿದ ಡಿಜಿಟಲ್‌ ಸೇವೆಯಲ್ಲಿ ಸರ್ವರ್‌ ದೋಷದಿಂದ ಕೆಲಸಗಳು ವಿಳಂಬವಾಗುತ್ತಿವೆ. ಮನಿಯಾರ್ಡರ್‌, ಸ್ಪೀಡ್‌ಪೋಸ್ಟ್‌, ರಿಜಿಸ್ಟರ್ಡ್‌ ಪೋಸ್ಟ್‌, ವಿದ್ಯುತ್‌ ಬಿಲ್‌ ಪಾವತಿಯಂತಹ ಸೇವೆಗಳು ಗ್ರಾಹಕರಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ.

Advertisement

ದೇಶದ 1.29 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳಲ್ಲಿ 2017ರ ಡಿ.15ರಿಂದ ದರ್ಪಣ (ಡಿಜಿಟಲ್‌ ಎಡ್ವಾನ್ಸ್‌ಮೆಂಟ್‌ ಆಫ್ ರೂರಲ್‌ ಪೋಸ್ಟ್‌ ಆಫೀಸ್‌ ಫಾರ್‌ ಎ ನ್ಯೂ ಇಂಡಿಯಾ) ಎನ್ನುವ ಯೋಜನೆ ಜಾರಿಯಾಗಿತ್ತು. ಸೇವಾ ಗುಣಮಟ್ಟ ವೃದ್ಧಿ, ಮೌಲ್ಯವರ್ಧಿತ ಸೇವೆಗಳ ಕೊಡುಗೆ, ಬ್ಯಾಂಕುಗಳು ಇಲ್ಲದಲ್ಲಿ ಹಣಕಾಸು ವ್ಯವಹಾರಗಳಲ್ಲಿ ಗ್ರಾಮೀಣ ಜನರ ಒಳಗೊಳ್ಳುವಿಕೆಗೆ ಪ್ರೋತ್ಸಾಹ ಇದರ ಮುಖ್ಯ ಉದ್ದೇಶ.

ಹೊಸ ಯಂತ್ರ: ಈಗ ಈ ಯೋಜನೆಯಂತೆ ಗ್ರಾಮೀಣ ಅಂಚೆ ಕಚೇರಿಗಳಿಗೆ ರೂರಲ್‌ ಇನ್ಫಾರ್ಮೇಷನ್ ಕಮ್ಯುನಿಕೇಶನ್‌ ಟೆಕ್ನಾಲಜಿ (ಆರ್‌ಐಸಿಟಿ) ಅಂಗವಾಗಿ ಇನ್ಫೋಸಿಸ್‌ ಮೂಲಕ ಸಿಂಪ್ಯೂಟರ್‌ ಮಾದರಿಯ ಉಪಕರಣ ನೀಡಲಾಗಿದೆ. ಇದರಲ್ಲಿ ಎಟಿಎಂ ಕಾರ್ಡ್‌ ಸ್ವೆ„ಪ್‌ ಮಾಡಬಹುದು, ಬೆರಳಚ್ಚು ಗುರುತು ತೆಗೆಯಬಹುದು. ಇಂಟರ್‌ನೆಟ್‌ ಸಂಪರ್ಕದಿಂದ ಎಲ್ಲ ವ್ಯವಹಾರಗಳೂ ತತ್‌ಕ್ಷಣ ಅಂಚೆ ಇಲಾಖೆಯ ಕಂಪ್ಯೂಟರ್‌ಗೆ ರವಾನೆಯಾಗುತ್ತವೆ.

ಉಪಯೋಗ: ಎಟಿಎಂ ಕಾರ್ಡ್‌ ಇದ್ದರೆ ಸಾಕು, ಮನಿಯಾರ್ಡರ್‌, ಸ್ಪೀಡ್‌ಪೋಸ್ಟ್‌, ರಿಜಿಸ್ಟರ್‌ ಪೋಸ್ಟ್‌ಗೆ ಪಾವತಿ ಮಾಡಬಹುದು. ರಿಜಿಸ್ಟರ್ಡ್‌ ಅಂಚೆ, ಸ್ಪೀಡ್‌ಪೋಸ್ಟ್‌, ಮನಿಯಾರ್ಡರ್‌, ವೃದ್ಧಾಪ್ಯ, ವಿಧವಾ, ಅಂಗವಿಕಲ ಮಾಸಾಶನಗಳನ್ನು ವಿತರಿಸಿದ ಕುರಿತು ತತ್‌ಕ್ಷಣ ಮಾಹಿತಿ ಅಪ್‌ಲೋಡ್‌ ಆಗುತ್ತದೆ. ವಿದ್ಯುತ್‌ ಬಿಲ್‌ ಪಾವತಿ ವಿವರ ತತ್‌ಕ್ಷಣ ಮೆಸ್ಕಾಂ ಕಂಪ್ಯೂಟರ್‌ಗೂ ರವಾನೆಯಾಗುತ್ತದೆ.

ದೂರುಗಳೇನು?: ಗ್ರಾಮಾಂತರದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದ್ದು, ಮಾಹಿತಿ ತುಂಬಲು ಆಗುತ್ತಿಲ್ಲ ಎಂಬ ಅಳಲು ಅಂಚೆ ನೌಕರರದು. ಈ ಕುರಿತು ನೌಕರರ ಸಂಘಟನೆ ಇಲಾಖೆಗೆ ದೂರು ಸಲ್ಲಿಸಿದೆ. ಸರ್ವರ್‌ ಬಿಝಿ ಸಂದೇಶ ಬರುವುದು ಬಹುದೊಡ್ಡ ಸಮಸ್ಯೆ. ಪ್ರಾಯಃ ಸರ್ವರ್‌ನ ಸಾಮರ್ಥ್ಯ ಹೆಚ್ಚಿಸದ ಕಾರಣ ವ್ಯವಹಾರ ತಾಸುಗಟ್ಟಲೆ ವಿಳಂಬವಾಗುತ್ತದೆ.

Advertisement

ಇದರಲ್ಲಿ ನಮೂದಿಸದ ವಿನಾ ಹಣಕಾಸಿಗೆ ಸಂಬಂಧಿಸಿದ, ದಾಖಲೆಗಳ ಮೂಲಕ ವಿತರಿಸುವ ಯಾವುದೇ ಕೆಲಸ ಮಾಡಲಾಗುತ್ತಿಲ್ಲ. ಸ್ಪೀಡ್‌ಪೋಸ್ಟ್‌, ರಿಜಿಸ್ಟರ್ಡ್‌ ಪೋಸ್ಟ್‌, ಮನಿಯಾರ್ಡರ್‌ ವಿತರಣೆ ಕೂಡ ವಿಳಂಬವಾಗುತ್ತಿದೆ ಎನ್ನುವುದು ಸಿಬ್ಬಂದಿ ದೂರು. ಅಕ್ಷರಗಳ ಕೀಲಿಮಣೆ ಸಣ್ಣದಾಗಿದ್ದು, ಕಾಣುವುದಿಲ್ಲ ಎನ್ನುತ್ತಾರೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಚೇರಿ ಸಮಯ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಸಂಜೆ 5 ಗಂಟೆಯಾದರೂ ಫೀಡ್‌ ಮಾಡುವ ಕೆಲಸ ಮುಗಿಯದು. ಯಂತ್ರಾರಂಭಕ್ಕೆ ಬೆರಳಚ್ಚು ಬೇಕಾದ ಕಾರಣ ಪೋಸ್ಟ್‌ ಮಾಸ್ಟರನ್ನು ಆಗಾಗ ಬದಲಿಸುವಂತಿಲ್ಲ. ಯಾರ ಬೆರಳಚ್ಚು ದಾಖಲಾಗಿದೆಯೋ ಅವರೇ ಬರಬೇಕಾಗುತ್ತದೆ.
-ಸಮಸ್ಯೆ ಎದುರಿಸುತ್ತಿರುವ ಪೋಸ್ಟ್‌ ಮಾಸ್ಟರ್‌

ಕೆಲವೆಡೆ ಸಿಗ್ನಲ್‌ ಸಮಸ್ಯೆ ಕುರಿತು ದೂರು ಬಂದಿದ್ದು ಆ್ಯಂಟೆನಾ ಕೊಡಲಾಗುತ್ತಿದೆ. ಈಗಾಗಲೇ ಸೇನಾಪುರ, ಇಡೂರು ಕುಂಞಾಡಿಯಲ್ಲಿ ಕೊಡಲಾಗಿದ್ದು, ಇತರೆಡೆಗೂ ನೀಡಲು ಕ್ರಮಕೈಗೊಳ್ಳಲಾಗಿದೆ. ಮನಿಯಾರ್ಡರ್‌, ಪೋಸ್ಟ್‌ ವಿತರಣೆಗೆ ಯಂತ್ರಾರಂಭಕ್ಕೆ ಕಾಯಬೇಕಿಲ್ಲ. ಪುಸ್ತಕದಲ್ಲಿ ಬರೆದು ವಿತರಿಸಬಹುದು. ಗ್ರಾಹಕರಿಗೆ ವಿಳಂಬ ಮಾಡುವಂತಿಲ್ಲ.
-ಗಣಪತಿ ಮರಡಿ, ಅಸಿಸ್ಟೆಂಟ್‌ ಸುಪರಿಂಟೆಂಡೆಂಟ್‌ ಆಫ್ ಪೋಸ್ಟ್‌, ಕುಂದಾಪುರ ಉಪವಿಭಾಗ‌

* ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next