Advertisement

ಪಾಲಿಕೆ ಬಜೆಟ್‌ ಅನುಮೋದನೆ ವಿಳಂಬ

12:20 PM Mar 28, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ 2018-19ನೇ ಸಾಲಿನ ಬಜೆಟ್‌ ಮಂಡನೆಯಾಗಿ ಒಂದು ತಿಂಗಳು ಕಳೆದರೂ ಸರ್ಕಾರದಿಂದ ಬಜೆಟ್‌ಗೆ ಅನುಮೋದನೆ ಪಡೆಯುವಲ್ಲಿ ಪಾಲಿಕೆಯ ಮೈತ್ರಿ ಆಡಳಿತ ವಿಫ‌ಲವಾಗಿದೆ. 

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಆಡಳಿತ 3ನೇ ಬಾರಿಗೆ ಬಜೆಟ್‌ ಮಂಡಿಸಿದ್ದು, ಸರ್ಕಾರದಿಂದ ಅನುಮೋದನೆ ಪಡೆಯಲು ಆಡಳಿತ ಪಕ್ಷ ವಿಳಂಬ ನೀತಿಯಿಂದಾಗಿ ಬಜೆಟ್‌ಗೆ ಇನ್ನೂ ಸರ್ಕಾರಕ್ಕೆ ಹೋಗಿಲ್ಲ. ಇದೀಗ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆಯಲು ಹೊಸ ಸರ್ಕಾರ ಬರುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್‌ ಅವರು ಕಳೆದ ಫೆ.28ರಂದು 9,325.53 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದರು. ನಂತರ ಒಂದು ವಾರದ ಸುದೀರ್ಘ‌ ಚರ್ಚೆಯ ಬಳಿಕ 883 ಕೋಟಿ ರೂ. ಹೆಚ್ಚುವರಿ ಆದಾಯ ಹಾಗೂ ವೆಚ್ಚದ ಪರಿಷ್ಕರಣೆಯೊಂದಿಗೆ 2018-19ನೇ ಸಾಲಿನ ಆಯವ್ಯಯದ ಮೊತ್ತವು 10,208 ಕೋಟಿ ರೂ.ಗೆ ಹೆಚ್ಚಿಸಿ ಮಾ.12ರಂದು ಕೌನ್ಸಿಲ್‌ ಸಭೆಯ ಅನುಮೋದನೆ ಪಡೆದಿದ್ದಾರೆ. 

ಆದರೆ,ಸೋಮವಾರ ಅನುಮೋದನೆಗಾಗಿ ಬಿಬಿಎಂಪಿ ಆಯುಕ್ತರಿಗೆ ಸಲ್ಲಿಕೆ ಮಾಡಲಾಗಿದ್ದು, ಮಂಗಳವಾರ ನೀತಿ ಸಂಹಿತೆ ಜಾರಿಯಾಗಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಪಾಲಿಕೆಯ ಬಜೆಟ್‌ಗೆ ಅನುಮೋದನೆ ನೀಡುವುದು ಅನುಮಾನ ಎನ್ನಲಾಗಿದೆ. ಇದಕ್ಕೆ ಮೇಯರ್‌ ಸಂಪತ್‌ರಾಜ್‌ ಅವರ ವಿಳಂಬ ದೋರಣೆಯೇ ಕಾರಣ ಎಂದು ಜೆಡಿಎಸ್‌ ನಾಯಕರೊಬ್ಬರು ಟೀಕಿಸಿದ್ದಾರೆ.

ಲೇಖಾನುದಾನಕ್ಕೆ ಸಮಸ್ಯೆಯಿಲ್ಲ: ಬಜೆಟ್‌ಗೆ ಅನುಮೋದನೆ ದೊರೆಯದಿದ್ದರೂ ಪಾಲಿಕೆಯ ದಿನ ನಿತ್ಯ ಕಾರ್ಯಗಳಿಗೆ ಯಾವುದೇ ಅಡ್ಡಿಯಿಲ್ಲ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ವೇತನ ಹಾಗೂ ಇತರೆ ಕೆಲಸಗಳಿಗೆ ಅನುದಾನ ಬಳಸಿಕೊಳ್ಳಬಹುದಾಗಿದೆ. 

Advertisement

ಪರಿಷ್ಕೃತ ಬಜೆಟ್‌ಗೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಪಡೆದು ಅನುಮೋದನೆಗಾಗಿ ಪಾಲಿಕೆಯ ಆಯುಕ್ತರಿಗೆ ಸಲ್ಲಿಕೆ ಮಾಡಲಾಗಿದೆ. 
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ 

ನಗರದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ಒಳಗೊಂಡ ಜನಪರ ಹಾಗೂ ವಾಸ್ತವಿಕ ಬಜೆಟ್‌ ಮಂಡಿಸುವ ಮೂಲಕ ನನ್ನ ಜವಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಸರ್ಕಾರದಿಂದ ಅನುಮೋದನೆ ಪಡೆಯುವುದು ಮೇಯರ್‌ ಹಾಗೂ ಆಡಳಿತ ಪಕ್ಷದ ನಾಯಕರ ಜವಾಬ್ದಾರಿ. 
-ಮಹದೇವ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

ಬಜೆಟ್‌ಗೆ ಪಾಲಿಕೆಯ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲು ಆಯುಕ್ತರಿಗೆ ಕಳುಹಿಸಲಾಗಿದೆ. ಇದೀಗ ನೀತಿ ಸಂಹಿತೆ ಜಾರಿಯಾಗಿದೆ. ಸರ್ಕಾರ ಅನುಮೋದಿಸಿದ್ದರೂ ಅನುಷ್ಠಾನ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮುಂದಿನ ಸರ್ಕಾರದಿಂದ ಅನುಮೋದನೆ ಪಡೆಯಲಾಗುವುದು. 
-ಆರ್‌.ಸಂಪತ್‌ರಾಜ್‌, ಮೇಯರ್‌ 

Advertisement

Udayavani is now on Telegram. Click here to join our channel and stay updated with the latest news.

Next