Advertisement
ಬೆಂಗಳೂರು: ಕನ್ನಡ ಭಾಷೆ ಕಲಿಕೆ ಹಾಗೂ ಕನ್ನಡ ಮಾಧ್ಯಮದಲ್ಲೇ ಅಧ್ಯಯನ, ಹೀಗೆ ಕನ್ನಡದ ಕಲಿಕೆ, ಬೋಧನೆಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾನ್ಯತೆ, ಪ್ರಾಮುಖ್ಯ ಸಿಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲೇ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ ಪೂರೈಸಿದವರಿಗೆ ಉದ್ಯೋಗ ದೊರಕಿಸುವ ಕೊಡುವ ನಿಟ್ಟಿನಲ್ಲೂ ರಾಜ್ಯಸರಕಾರ ಮುಂದಾಗಬೇಕು.
ಪೂರ್ಣ ಪ್ರಮಾಣದಲ್ಲಿ ಕನ್ನಡ ಮಾಧ್ಯಮದಲ್ಲೇ ಪದವಿ ಪೂರೈಸಿ, ಉನ್ನತ ಅಧ್ಯಯನವೂ ನಡೆಸಿರುವ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಳ್ಳುವುದು ಹೇಗೆ ಎಂಬ ಆತಂಕ ಇಂದಿಗೂ ಇದೆ. ಸರಕಾರವೇ ಇದಕ್ಕೆ ಪರಿಹಾರ ಸೂಚಿಸಬೇಕು. ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ಅವರ ಸಾಮರ್ಥ್ಯದ ಮೇಲೆ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೊಂದಿಗೆ ಔದ್ಯೋಗಿಕ ರಂಗ ಪ್ರವೇಶದ ಸಂದರ್ಭದ ಪ್ರಬಲ ಸ್ಪರ್ಧೆ ನೀಡಬಲ್ಲರು. ಆದರೆ, ಸರಕಾರದಿಂದ ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ ಉಳಿಸುವ ಭಾಗವಾಗಿ ಕನ್ನಡ ಮಾಧ್ಯಮದ ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ ಒದಗಿಸುವ ಕಾರ್ಯ ಆಗಬೇಕು. ಕನ್ನಡದಲ್ಲಿಯೇ ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗೆ ಕರ್ನಾಟಕದಲ್ಲೇ ಉತ್ತಮ ಉದ್ಯೋಗ ದೊರೆಯುವಂತಾಗಬೇಕು. ಇದಕ್ಕಾಗಿ ಐಟಿ-ಬಿಟಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದ ಪದವೀಧರರಿಗೆ ಆದ್ಯತೆಯಂತೆ ಉದ್ಯೋಗ ನೀಡಲು ಕಾನೂನಿನ ತಿದ್ದುಪಡಿಯೂ ತರಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು.
Advertisement
ಉದ್ಯೋಗಾವಕಾಶ ಹೆಚ್ಚಿಸಬೇಕುಯಾವುದೇ ಪದವಿ ಅಥವಾ ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡ ಮಾಧ್ಯಮದ ಬೋಧನೆ ಆರಂಭವಾಗಿದೆ ಎಂದಾಕ್ಷಣವೇ ವಿದ್ಯಾರ್ಥಿಗಳು ಸೇರುವುದಿಲ್ಲ. ಪಾಲಕ, ಪೋಷಕರು ಕೂಡ ಸುಲಭದಲ್ಲಿ ಸೇರಿಸಲು ಒಪ್ಪುವುದಿಲ್ಲ. ಕೋರ್ಸ್ ಪೂರ್ಣವಾದ ಅನಂತರ ಉದ್ಯೋಗಾವಕಾಶ ಸಿಗುವುದೇ ಎಂಬುದನ್ನು ನೋಡುತ್ತಾರೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದವರಿಗೆ ಸರಕಾರವೇ ಆದ್ಯತೆಯಂತೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಈಗಿಂದಲೇ ಆರಂಭಿಸಬೇಕು. ಇಲ್ಲವಾದರೆ, ಕನ್ನಡ ಮಾಧ್ಯಮಕ್ಕೆ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ವಿಭಾಗವೇ ಮುಚ್ಚಬಹುದಾದ ಸನ್ನಿವೇಶವೂ ಎದುರಾಗಬಹುದು. ಹೀಗಾಗಿ ಉದ್ಯೋಗಾವಕಾಶದ ಬಗ್ಗೆ ಸ್ಪಷ್ಟತೆ ಆರಂಭದಲ್ಲೇ ನೀಡಬೇಕು ಎಂದು ವಿಶ್ರಾಂತ ಕುಲಪತಿಯೊಬ್ಬರು ಮಾಹಿತಿ ನೀಡಿದರು. ಜರ್ಮನಿ, ರಷ್ಯಾ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಅವರ ಭಾಷೆಯಲ್ಲಿ ಶಿಕ್ಷಣ ಪಡೆದವರು ಹೇಗೆ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೋ ಅದೇ ಮಾದರಿಯಲ್ಲಿ ಇಲ್ಲಿಯೂ ಕನ್ನಡದಲ್ಲಿ ಪದವಿ ಪಡೆದವರಿಗೆ ಉದ್ಯೋಗ ಪಡೆಯಲು ಅನುಕೂಲವಾಗುವ ವಾತಾವರಣ ನಿರ್ಮಾಣ ಮಾಡಲಿದ್ದೇವೆ. ವಿಶೇಷ ಎಂಬಂತೆ, ಇಂತಹವರಿಗೆ ಇಂಗ್ಲಿಷ್ ಕಲಿಸುವುದಕ್ಕೂ ಒತ್ತು ನೀಡುತ್ತೇವೆ.
-ಡಾ| ಸಿ.ಎನ್.ಅಶ್ವತ್ಥನಾರಾಯಣ,
ಉನ್ನತ ಶಿಕ್ಷಣ ಸಚಿವ ಪದವಿಯಲ್ಲ ಕನ್ನಡ ಕಲಿಕೆ ಕಡ್ಡಾಯವಾಗಿ ಆಗಬೇಕು. ಮಾತೃಭಾಷೆ ಚೆನ್ನಾಗಿ ಕಲಿತಾಗ ಮಾತ್ರ ಬೇರೆ ಭಾಷೆ ಕಲಿಯಲು, ವಿಷಯ ಅರ್ಥೈಸಿಕೊಳ್ಳಲು ಸಾಧ್ಯವಿದೆ. ಭಾಷಾ ಕೌಶಲ ಚೆನ್ನಾಗಿದ್ದರೆ ಉದ್ಯೋಗ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಪದವಿ ಅಥವಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಮಾತ್ರಕ್ಕೆ ಉದ್ಯೋಗ ಸಿಗುವುದಿಲ್ಲ ಎಂಬ ತಪ್ಪು ಕಲ್ಪನೆ ಇರಬಾರದು.
-ಪ್ರೊ| ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿಶ್ವವಿದ್ಯಾನಿಲಯ ಕುಲಪತಿ