Advertisement

ಪದವಿ ಪರೀಕ್ಷೆ: ಎಂಡೋ ಪೀಡಿತನ ಸಾಧನೆ; ಬಿ.ಕಾಂ.ನಲ್ಲಿ ಶೇ. 79.16 ಅಂಕ ಗಳಿಸಿದ ಪ್ರದೀಪ

12:48 AM Nov 19, 2020 | mahesh |

ಉಪ್ಪಿನಂಗಡಿ: ಸಾಧಿಸುವ ಛಲವಿದ್ದವನಿಗೆ ಸಮಸ್ಯೆಗಳಾವುವೂ ಅಡ್ಡಿಯಾಗವು ಎಂಬ ನುಡಿಯಂತೆ ಎಂಡೋ ಪೀಡಿತನಾಗಿ ಕಾಲುಗಳೆರಡೂ ಬಲಹೀನವಾಗಿದ್ದರೂ ತಂದೆಯ ಸಹಕಾರದಿಂದ ಕಾಲೇಜು ಶಿಕ್ಷಣ ಪಡೆಯುತ್ತಿರುವ ಗೋಳಿತೊಟ್ಟು ಗ್ರಾಮದ ಶಾಂತಿನಗರ ಬರೆಮೇಲು ನಿವಾಸಿ ಪ್ರದೀಪ ಬಿ.ಜೆ. ಅವರು ಬಿ.ಕಾಂ. ಪದವಿಯನ್ನು ಶೇ. 79.16 ಅಂಕಗಳೊಂದಿಗೆ ಪಡೆದು ಸಾಧನೆ ತೋರಿದ್ದಾರೆ.

Advertisement

ಕಾಂಚನ ಶಾಲೆಯಲ್ಲಿ ಎಸೆಸೆಲ್ಸಿಯನ್ನು ಅತ್ಯುತ್ತಮ ಅಂಕಗಳೊಂದಿಗೆ ಪೂರೈಸಿ ಶಿಕ್ಷಣ ಮುಂದುವರಿಸುವ ಆಸಕ್ತಿ ತೋರಿದಾಗ ತನ್ನ ಜೀವನ ನಿರ್ವಹಣೆಯ ಉದ್ಯೋಗವನ್ನು ತೊರೆದು ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತವರು ತಂದೆ ಜನಾರ್ದನ ಗೌಡ. ಅವರು ಮೂರು ವರ್ಷ ನಿರಂತರವಾಗಿ ಮಗನನ್ನು ಮನೆಯಿಂದ ಉಪ್ಪಿನಂಗಡಿ ಕಾಲೇಜಿಗೆ, ಕಾಲೇಜಿನಿಂದ ಮನೆಗೆ ಕರೆದುಕೊಂಡು ಬರುವ ಮೂಲಕ ಆತನ ಸಾಧನೆಯ ಕನಸನ್ನು ನೀರೆರೆದು ಪೋಷಿಸಿದರು.

ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿರುವ ಪ್ರದೀಪ ಅವರು ಆರು ಸೆಮಿಸ್ಟರ್‌ಗಳನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿರುವುದಲ್ಲದೆ ಅಂತಿಮವಾಗಿ ಶೇ. 79.16 ಅಂಕಗಳೊಂದಿಗೆ ಪದವಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಎದ್ದು ನಡಯಲಾರದ ಸ್ಥಿತಿಯಲ್ಲಿದ್ದರೂ ಯಾವುದೇ ಕೀಳರಿಮೆಗೆ ಸಿಲುಕದೆ ಕಲಿಯುವ ಅದಮ್ಯ ಬಯಕೆಯಿಂದ ಉತ್ತಮ ಅಂಕಗಳೊಂದಿಗೆ ಬಿಕಾಂ ಪದವೀಧರನಾದ ಪ್ರದೀಪ ನಾಗರಿಕ ಸಮಾಜಕ್ಕೆ ಆದರ್ಶಪ್ರಾಯನೆನಿಸಿದ್ದಾರೆ. ಆತ ಎಂಕಾಂ ಪದವಿ ಪಡೆಯಲು ಹಂಬಲಿಸಿದ್ದೇ ಆದರೆ ಆತನಿಗೆ ಎಲ್ಲ ರೀತಿಯ ಸಹಕಾರ ನೀಡಲು ನಮ್ಮ ಕಾಲೇಜು ಸಿದ್ಧವಾಗಿದೆ.
– ಸುಬ್ಬಪ್ಪ ಕೈಕಂಬ, ಪ್ರಾಂಶುಪಾಲರು, ಉಪ್ಪಿನಂಗಡಿಯ ಸ.ಪ್ರ.ದ. ಕಾಲೇಜು

ಉತ್ತಮ ಅಂಕ ಪಡೆದು ಬಿಕಾಂ ಪದವಿ ಪಡೆದ ಬಗ್ಗೆ ಸಂತಸವಿದೆ. ಈ ಸಾಧನೆಗೆ ಕಾರಣಕರ್ತರಾದ ನನ್ನ ಹೆತ್ತವರಿಗೆ, ಪ್ರಾಂಶುಪಾಲರಾದಿಯಾಗಿ ಎಲ್ಲ ಉಪನ್ಯಾಸಕರಿಗೆ ನಾನು ಕೃತಜ್ಞ. ಮುಂದಕ್ಕೆ ಕಲಿಯುವ ಹಂಬವೇನೋ ಇದೆ. ಆದರೆ ಇನ್ನಷ್ಟು ಕಾಲ ತಂದೆಗೆ ಹೊರೆಯಾಗದಂತೆ ಯಾವುದಾದರೂ ಸರಕಾರಿ ಕೆಲಸಕ್ಕೆ ಸೇರಲು ಬಯಸಿದ್ದೇನೆ. ಅನುಕೂಲವಾದರೆ ಜತೆಯಲ್ಲಿ ಕಲಿಕೆಯನ್ನು ಮುಂದುವರಿಸುವೆ.
– ಪ್ರದೀಪ ಬಿ.ಜೆ.

Advertisement

ಸಮಸ್ಯೆಗಳೇನೇ ಇರಲಿ. ಮಗ ಬಯಸಿದ್ದನ್ನು ಸಾಧಿಸಿದ ಎಂಬ ಹೆಮ್ಮೆ ನನಗಿದೆ. ಮುಂದಕ್ಕೆ ಅವನು ಏನು ಬಯಸುತ್ತಾನೋ ಅದರಂತೆ ಸಾಗಲು ಸಹಕರಿಸುತ್ತೇನೆ.
– ಜನಾರ್ದನ ಗೌಡ

Advertisement

Udayavani is now on Telegram. Click here to join our channel and stay updated with the latest news.

Next