Advertisement

ಕನ್ನಡ ಕಲಿಕೆ ಕಡ್ಡಾಯಕ್ಕೆ ತಡೆ: ಸರಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

12:11 AM Apr 07, 2022 | Team Udayavani |

ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಸೇರಿ ಕೆಲ ಸಂಘ-ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿತು.

“ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ’ ಎಂದು ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಈ ನಿಲುವು ಆಧರಿಸಿ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಲಾಗುತ್ತಿದೆ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವಂತಿಲ್ಲ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಆದ್ದರಿಂದ, ಪದವಿ ಹಂತದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2021ರ ಆ.7 ಹಾಗೂ ಸೆ.15ರಂದು ಹೊರಡಿಸಿರುವ ಆದೇಶ ಜಾರಿಗೆ ನ್ಯಾಯಾಲಯದ ಮುಂದಿನ ಆದೇಶದ ವರೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ತಿಳಿಸಿ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌, ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿತು.

ಆದೇಶ ಮರುಪರಿಶೀಲಿಸಲು ಸೂಚಿಸಿತ್ತು:
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹೊರಗಿನಿಂದ ಬಂದ ವಿದ್ಯಾರ್ಥಿಗಳ ಮೇಲೆ ಕನ್ನಡ ಭಾಷೆ ಕಲಿಕೆಯನ್ನು ಏಕೆ ಹೇರುತ್ತೀರಿ?. ಉದ್ಯೋಗ ಪಡೆಯಲು ಕನ್ನಡ ಕಲಿಕೆಯುವಂತೆ ಷರತ್ತು ವಿಧಿಸಿ. ಆದರೆ, ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಹೇರಲಾಗದು. ಸರ್ಕಾರದ ನೀತಿಯಿಂದ ಪದವಿಗೂ ಮೊದಲು ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.

ಹಾಗಾಗಿ ಸರ್ಕಾರವು ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲವಾದರೆ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಆದೇಶ ಮರುಪರಿಶೀಲಿಸುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಿಳಿಸದ ಕಾರಣ, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.

Advertisement

ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಎಸ್‌. ನಾಗಾನಂದ, ಶ್ರೀಧರ ಪ್ರಭು ಮತ್ತಿತರರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ. ನರಗುಂದ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ:ಉರ್ದು ಮಾತನಾಡದ ಕಾರಣಕ್ಕೇ ಚಂದ್ರು ಕೊಲೆ: ಪುನರುಚ್ಚರಿಸಿದ ಬಿಜೆಪಿ

ಅರ್ಜಿದಾರರ ವಾದ:
ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವುದನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸಂವಿಧಾನ ಬಾಹಿರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕನ್ನಡ ಕಡ್ಡಾಯ ಎಂದು ಹೇಳಿಲ್ಲ. ಶಾಲಾ ಕಲಿಕೆಯಲ್ಲೂ ಕನ್ನಡ ಕಡ್ಡಾಯವಿಲ್ಲ. ಇಂತಹ ಸನ್ನಿವೇಶದಲ್ಲಿ ಹೀಗಿದ್ದರೂ ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ ಹಾಗೂ ಪದವಿಯಲ್ಲಿ ಭಾಷೆ ವಿಷಯ ಆಯ್ಕೆಗೂ ಅಡ್ಡಿಯಾಗಿದೆ. ಆದ್ದರಿಂದ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ರಾಜ್ಯ ಸರ್ಕಾರದ ವಿವರಣೆ:
ಒಂದು ಭಾಷಾ ವಿಷಯವಾಗಿ ಕಲಿಯಲು ಕನ್ನಡವನ್ನು ಪರಿಚಯಿಸಲಾಗುತ್ತಿದೆ. ಆದರೆ, ಶಾಸ್ತ್ರೀಯವಾಗಿ ಕನ್ನಡ ಕಲಿಸುವ ಉದ್ದೇಶವಿಲ್ಲ . ಸರ್ಕಾರದ ನೀತಿಯ ಭಾಗವಾಗಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ಇದೊಂದು ಸದುದ್ದೇಶದ ಪ್ರಯತ್ನವಾಗಿದೆ. ಕನ್ನಡ ಕಲಿಯುವುದರಿಂದ ರಾಜ್ಯದಲ್ಲಿ ಉದ್ಯೋಗ ಪಡೆಯುವುದಕ್ಕೆ ಸಹಕಾರಿಯಾಗುತ್ತದೆ. ಸರ್ಕಾರದ ಆದೇಶ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಸ್ಯೆಯಾದರೆ ಶಿಕ್ಷಕರು, ವಿದ್ಯಾರ್ಥಿಗಳು ನ್ಯಾಯಾಲಯದ ಮುಂದೆ ಬರಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪದಲ್ಲಿ ಪ್ರಶ್ನಿಸಿರುವುದು ಸಮರ್ಥನೀಯವಲ್ಲ.

ಕೇಂದ್ರ ಸರ್ಕಾರದ ನಿಲುವು:
ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ಅದರ ನಿಯಮಗಳಲ್ಲಿ ಉಲ್ಲೇಖವಿಲ್ಲ. ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಮಹಾತ್ವಾಕಾಂಕ್ಷೆ ಹಾಗೂ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸುಲಭವಾಗಿ ಸಮಗ್ರ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎನ್‌ಇಪಿ ಜಾರಿಗೊಳಿಸಲಾಗಿದೆ.

ಎನ್‌ಇಪಿಯ 22ನೇ ಅಧ್ಯಾಯದಲ್ಲಿ ಭಾರತದ ಭಾಷೆಗಳು, ಕಲೆ ಮತ್ತು ಸಂಸ್ಕೃತಿ ಪ್ರಚಾರದ ಬಗ್ಗೆ ಹೇಳಲಾಗಿದೆ. ಇದೇ ಅಧ್ಯಾಯದಲ್ಲಿ ದ್ವಿಭಾಷೆಗೆ ಅವಕಾಶವಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಬೋಧನಾ ಭಾಷೆಯನ್ನಾಗಿ ಬಳಕೆ ಮಾಡಬಹುದಾಗಿದೆ. ಎನ್‌ಇಪಿ ಮತ್ತದರ ನಿಯಮಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಹೀಗಾಗಿ, ಎನ್‌ಇಪಿ ನಿಯಮಗಳನ್ನು ಪುನರ್‌ ವ್ಯಾಖ್ಯಾನಿಸುವ ಅಗತ್ಯ ಉದ್ಭವಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next