ಮಸ್ಕಿ: ತಾಲೂಕಿನ ಬಹುತೇಕ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಹಲವು ಲೋಪದೋಷಗಳು ಬಯಲಾಗಿದ್ದು, ಕೂಡಲೇ ಇವುಗಳನ್ನು ಸರಿಪಡಿಸಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಟಿ. ರೋಣಿ ಸೂಚನೆ ನೀಡಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನರೇಗಾ ಯೋಜನೆಯ ತಾಲೂಕು ಅಡಕ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದು ಮೃತಪಟ್ಟ ಕೂಲಿಕಾರರ ಹೆಸರಿಗೂ ಹಣ ಪಾವತಿಯಾಗಿದೆ. ಇನ್ನು ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿದ ಕಾಮಗಾರಿಗಳಿಗೆ ಸ್ಥಳದಲ್ಲಿ ಯಾವುದೇ ನಾಮಫಲಕ ಹಾಕಿಲ್ಲ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಹಲವು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಪಿಡಿಒಗಳು ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಜಿಪಂ ಸಿಇಒ ತಾಲೂಕಿಗೆ ಭೇಟಿ ನೀಡಲಿದ್ದು, ಅಷ್ಟರೊಳಗೆ ಅಗತ್ಯ ದಾಖಲಾತಿ ಸಲ್ಲಿಸಿ, ಬಾಕಿ ಪ್ರಕರಣ ಇತ್ಯರ್ಥಪಡಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಸಂಪೂರ್ಣ ಜವಾಬ್ದಾರಿ ವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ಪಿಡಿಒಗಳ ಸಂಬಳದಲ್ಲಿ ಕಡಿತ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಗ್ರಾಪಂಗೆ ಭೇಟಿ ನೀಡಿದಾಗ ಪ್ರತಿ ಕಾಮಗಾರಿ ದರ ಪಟ್ಟಿ ಸೇರಿ ವಿವಿಧ ದಾಖಲೆಗಳ ಫೈಲ್‌ಗಳನ್ನು ಸಿದ್ಧಪಡಿಸಿರಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ತಾಪಂ ಇಒ ಬಾಬು ರಾಠೊಡ್, ಎಡಿಎ ಶಿವಾನಂದರೆಡ್ಡಿ, ಬಸವರಾಜ ನಾಗೋಲಿ, ಶೇಖ ಹುಸೇನ ಶರೀಫ್, ಗ್ರಾಪಂ ಪಿಡಿಒಗಳು ಹಾಗೂ ತಾಪಂ ಸಿಬ್ಬಂದಿ ಗಂಗಾಧರ ಮೂರ್ತಿ, ನವೀನ್ ಸೇರಿದಂತೆ ಇತರರಿದ್ದರು.