ಬೆಂಗಳೂರು: ಒಲಿಂಪಿಯನ್ ಬೀರೇಂದ್ರ ಲಾಕ್ರಾ ಅವರನ್ನು ಒಳಗೊಂಡ ಹಾಲಿ ಚಾಂಪಿಯನ್ ಭಾರತೀಯ ಪುರುಷರ ಹಾಕಿ ತಂಡ ಏಷ್ಯನ್ ಕಪ್ ಹಾಕಿ ಕೂಟದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಜಕಾರ್ತಾಕ್ಕೆ ತೆರಳಿತು.
ಭಾರತವು ಸೋಮವಾರ ಪಾಕಿಸ್ಥಾನವನ್ನು ಎದುರಿಸುವ ಮೂಲಕ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಲಿದೆ. ಭಾರತ “ಎ’ ಬಣದಲ್ಲಿದೆ. ಪಾಕಿಸ್ಥಾನ, ಜಪಾನ್ ಮತ್ತು ಆತಿಥೇಯ ಇಂಡೋನೇಷ್ಯಾ ಈ ಗುಂಪಿನ ಉಳಿದ ತಂಡಗಳು. ಮಲೇಷ್ಯಾ, ಕೊರಿಯ, ಒಮಾನ್ ಮತ್ತು ಬಾಂಗ್ಲಾದೇಶ “ಬಿ’ ಬಣದಲ್ಲಿದೆ.
“ಭಾರತೀಯ ತಂಡ ಭಾರೀ ಉತ್ಸಾಹದಲ್ಲಿದೆ. ಏಷ್ಯನ್ ಕಪ್ ಪ್ರತಿಷ್ಠಿತ ಪಂದ್ಯಾವಳಿಯಾಗಿದೆ. ಕೆಲವು ಆಟಗಾರರು ಈ ಕೂಟದಲ್ಲಿ ಇದೇ ಮೊದಲ ಬಾರಿ ಆಡುತ್ತಿದ್ದಾರೆ. ಎಲ್ಲರೂ ಬಹಳ ಲವಲವಿಕೆಯಿಂದ ಇದ್ದಾರೆ’ ಎಂದು ಲಾಕ್ರಾ ಹೇಳಿದ್ದಾರೆ.
“ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಡೆದ ನಮ್ಮ ಶಿಬಿರ ಅತ್ಯಂತ ಕಠಿನವಾಗಿತ್ತು ಮತ್ತು ಫಲಪ್ರದವಾಗಿತ್ತು. ಇಲ್ಲಿ ಪ್ರತಿಯೊಬ್ಬ ಆಟಗಾರನ ಶಕ್ತಿ ಸಾಮರ್ಥ್ಯದ ಅರಿವಾಗಿದೆ. ಅಂಗಣದಲ್ಲಿ ಆಟಗಾರರ ಚಲನವಲನದ ವೇಳೆ ನಡೆಯುವ ಸಂಪರ್ಕವೂ ಉತ್ತಮಗೊಂಡಿದೆ. ನಮ್ಮ ಫಿಟ್‌ನೆಸ್ ಬಗ್ಗೆ ಕೋಚ್ ಸರ್ದಾರ್ ಸ್ಪಷ್ಟ ನಿಲುವು ಇಟ್ಟುಕೊಂಡಿದ್ದಾರೆ’ ಎಂದು ಲಾಕ್ರಾ ತಿಳಿಸಿದರು.
ಭಾರತೀಯ ತಂಡ 2017ರಲ್ಲಿ ಢಾಕಾದಲ್ಲಿ ನಡೆದ ಕೂಟದ ಫೈನಲ್‌ನಲ್ಲಿ ಮಲೇಷ್ಯಾವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.