ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ಲಭ್ಯವಿರುವ ಅಧಿಕಾರ, ರಚಿಸಲಾಗಿರುವ ನಿಯಮಗಳ ಮರು ಪರಿಶೀಲನೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಯಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ಕಾಗೇರಿ ಅವರು, ಪಕ್ಷಾಂತರ ನಿಷೇಧ ಕಾಯ್ದೆ ಸುಧಾರಣೆ ಮಾಡಲು ಅರುವತ್ತು ವರ್ಷಗಳಿಂದ ನಿರಂತರವಾಗಿ ಹಲವಾರು ತಿದ್ದುಪಡಿಗಳು, ಚರ್ಚೆಗಳು, ಮಾರ್ಪಾಡುಗಳು ನಡೆದಿವೆ. ಆದರೂ ಕೆಲವೊಮ್ಮೆ ಲೋಪ ದೋಷಗಳು ಆಗುತ್ತಲೇ ಇವೆ. ಹೀಗಾಗಿ ಇಂಥದ್ದೊಂದು ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ರಾಷ್ಟ್ರಮಟ್ಟದಲ್ಲಿ ಅಧ್ಯಯನ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ವತಿಯಿಂದ ಸಾರ್ವಜನಿಕರು ಮತ್ತು ವಿಷಯ ಪರಿಣತರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಲೋಕಸಭೆಯ ಅಧ್ಯಕ್ಷರು, ರಾಜಸ್ಥಾನ, ಒಡಿಶಾ ಹಾಗೂ ಕರ್ನಾಟಕ ವಿಧಾನಸಭೆ ಅಧ್ಯಕ್ಷರನ್ನೊಳಗೊಂಡ ಮೂವರ ಅಧ್ಯಯನ ಸಮಿತಿ ರಚನೆಯಾಗಿದ್ದು ಈಗಾಗಲೇ ರಾಜಸ್ಥಾನದಲ್ಲಿ ಒಂದು ಸಭೆ ಮತ್ತು ವಿಚಾರ ಸಂಕಿರಣ ನಡೆದಿದೆ ಎಂದು ಹೇಳಿದರು.
ಜನರೂ ಸಲಹೆ ನೀಡಬಹುದು
ಸಾರ್ವಜನಿಕರು, ತಜ್ಞರು, ಆಸಕ್ತರು ಪಕ್ಷಾಂತರ ತಿದ್ದುಪಡಿ ಕಾಯ್ದೆ ಸುಧಾರಣೆ ಸಂಬಂಧ ಜೂ. 10ರೊಳಗೆ ಲಿಖೀತ ಸಲಹೆ, ಸೂಚನೆ, ಇ-ಮೇಲ್, ಅಂಚೆ ಮೂಲಕ ವಿಧಾನಸಭೆ ಕಾರ್ಯದರ್ಶಿ ಅವರಿಗೆ ಕಳುಹಿಸಬಹುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.