ಶಿರಸಿ: ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಭೇಟಿ ಮಾಡಿ ಸಲಹೆ ಸೂಚನೆ ಪಡೆಯುತ್ತೇನೆ. ನಾನು ಅವರು ಒಂದೇ ಸಿದ್ದಾಂತಕ್ಕೆ ತೊಡಗಿಸಿಕೊಂಡು ಕೆಲಸ ಮಾಡಿದವರು, ಪ್ರಚಾರಕ್ಕೆ ಸಹ ಅವರು ಬರಲಿದ್ದಾರೆ ಎಂದು ಮಾಜಿ ಸ್ಪೀಕರ್, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ,ಕಾಂಗ್ರೆಸ್ ಬಗ್ಗೆ ಇಡೀ ದೇಶದ ಜನತೆ ಭ್ರಮ ನಿರಸನಗೊಂಡಿದೆ. ರಾಹುಲ್ ಗಾಂಧಿಯನ್ನು ಯಾರೂ ಕೂಡ ಈ ದೇಶಕ್ಕೆ ನೇತೃತ್ವಕೊಡಬಹುದು ಎಂಬುದನ್ನೇ ಪರಿಗಣಿಸಿಲ್ಲ. ಮೋದಿ ಅವರೇ ದೇಶದ ನಾಯಕರು ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ರವರು ತಮ್ಮ ಆಡಳಿತ ವೈಫಲ್ಯತೆಯನ್ನ ಮುಚ್ಚಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆಡಳಿತ ವೈಫಲ್ಯದ ಹತಾಶ ಸ್ಥಿತಿಗೆ ರಾಜ್ಯ ಕಾಂಗ್ರೆಸ್ ಹೋಗಿದೆ ಎಂದ ಕಾಗೇರಿ, ಕಾಂಗ್ರೆಸ್ ಅವರು ಘೋಷಿಸಿದ ಗ್ಯಾರಂಟಿ ಯನ್ನೇ ಅರ್ಹರಿಗೆ ಅದನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಕಾಲ ಕಾಲಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಅಭಿವೃದ್ಧಿಗೆ ಹಣ ಇಲ್ಲ. ಆಡಳಿತದಲ್ಲಿ ನಿಯಂತ್ರಣ ಇಲ್ಲ ಎಂದರು.
ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ತಾನು ಯಾವತ್ತು ಕುರ್ಚಿ ಬಿಡುತ್ತೀನೋ ಅಂತ ಅವರಿಗೆ ಗೊತ್ತಿದೆ. ಅದನ್ನು ಹೊರಗೆ ಹೇಳದಿರಬಹುದು ಹಾಗಾಗಿ ಆಡಳಿತದ ಬಗ್ಗೆ ಆಸಕ್ತಿ ಇಲ್ಲ. ಡಿಕೆ ಶಿವಕುಮಾರ್ ರವರು ಮುಂದಿನ ಕುರ್ಚಿಗಾಗಿ ಕಾಯ್ದುಕೊಂಡಿದ್ದಾರೆ. ಹಾಗಾಗಿ ಕುರ್ಚಿ ಬಂದ ಮೇಲೆ ನೋಡೋಣ ಅಂತ ಇದ್ದಾರೆ. ಇಂತಹ ಸ್ಥಿತಿಯಲ್ಲಿ ಆಡಳಿತ ಕುಸಿದು ಹೋದ ಸ್ಥಿತಿ ನೋಡುತ್ತಿದ್ದೇವೆ ಎಂದರು.
ಭಾರತೀಯ ಜನತಾ ಪಾರ್ಟಿ ,ಕಾಂಗ್ರೆಸ್ ನಡುವೆ ಈ ಚುನಾವಣೆ. ಅಭ್ಯರ್ಥಿ ಗಳು ನಿಮಿತ್ತ ಮಾತ್ರ. ಅಭ್ಯರ್ಥಿಗಳ ಹೆಸರಿನ ನಡುವೆ ನಡೆಯುವ ಚುನಾವಣೆ ಅಲ್ಲ ಎಂದ ಅವರು, ಕಾಂಗ್ರೆಸ್ ಹತಾಶ ಸ್ಥಿತಿಯಲ್ಲಿ ಇರೋದ್ರಿಂದ ಅವರಿಗೆ 100 ಸೀಟು ನಿಲ್ಲಿಸಲು ಆಗುತ್ತಿಲ್ಲ ಎಂದು ಹೇಳಿದರು.