Advertisement

ರಕ್ಷಣೆ, ವ್ಯಾಪಾರ, ತಾಂತ್ರಿಕ ಸಹಭಾಗಿತ್ವ: ಪ್ರಧಾನಿ ಅಮೆರಿಕ ಭೇಟಿ ವೇಳೆ ಮಹತ್ವದ ಸಂಗತಿಗಳು

08:39 PM Jun 19, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.21ರಿಂದ 24ರವರೆಗೆ ಐತಿಹಾಸಿಕ ಅಮೆರಿಕ ಪ್ರವಾಸದಲ್ಲಿರುತ್ತಾರೆ. ಜಾಗತಿಕವಾಗಿ ಇದು ಅತ್ಯಂತ ಕುತೂಹಲ ಕೆರಳಿಸಿದೆ. ಈ ವೇಳೆ ಏನು ಚರ್ಚೆಗಳು, ಒಪ್ಪಂದಗಳಾಗಬಹುದು ಎಂಬ ಬಗ್ಗೆ ಕಾತುರತೆಯಿದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿನಯ್‌ ಮೋಹನ್‌ ಕ್ವಾಟ್ರ ಈ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ.

Advertisement

ರಕ್ಷಣಾ ಕ್ಷೇತ್ರದಲ್ಲಿ ಸಹ ಉತ್ಪಾದನೆ, ಸಹ ಅಭಿವೃದ್ಧಿ ಮೊದಲ ಆದ್ಯತೆಯಾಗಿದೆ. ದ್ವಿಪಕ್ಷೀಯವಾಗಿ ಎರಡೂ ದೇಶಗಳು ಈ ಕ್ಷೇತ್ರದಲ್ಲಿ ಬಲವಾದ ಸಹಕಾರಕ್ಕೆ ನಿರ್ಧರಿಸಲಿವೆ. ಇನ್ನೊಂದು ಮುಖ್ಯ ವಿಷಯವೆಂದರೆ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಹಭಾಗಿತ್ವ. ಮೂರನೆಯದಾಗಿ ತಾಂತ್ರಿಕ ಸಹಭಾಗಿತ್ವ. ದೂರಸಂಪರ್ಕ, ಬಾಹ್ಯಾಕಾಶ, ಉತ್ಪನ್ನ ತಯಾರಿಕೆ, ಹೂಡಿಕೆಯಂತಹ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಭಾಗಿತ್ವ ಸಾಧಿಸುವ ಗುರಿಯಿದೆ ಎಂದು ವಿನಯ್‌ ಮೋಹನ್‌ ಹೇಳಿದ್ದಾರೆ.

ಪಕ್ಷಾತೀತವಾಗಿ ಬೆಂಬಲ:
ಮೋದಿ ಅಧಿಕೃತ ಪ್ರವಾಸ ಇಡೀ ಅಮೆರಿಕದಲ್ಲೇ ಸಂಚಲನಕ್ಕೆ ಕಾರಣವಾಗಿದೆ. ಅಲ್ಲಿ ಪಕ್ಷಾತೀತವಾಗಿ ಮೋದಿಗೆ ಸ್ವಾಗತ ಕೋರಲಾಗುತ್ತಿದೆ. ರಿಪಬ್ಲಿಕನ್‌ ಪಕ್ಷದ ಸಂಸದ (ಸೆನೇಟರ್‌) ಟಾಡ್‌ ಯಂಗ್‌ ಮಾತನಾಡಿ, ಮೋದಿ ಭೇಟಿ ಎರಡೂ ದೇಶಗಳ ಸಂಬಂಧದಲ್ಲಿ ಮಹತ್ವ ಪಾತ್ರವಹಿಸಲಿದೆ ಎಂದಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ಡೆಮಾಕ್ರಾಟ್‌ ಸರ್ಕಾರವಿದೆ.

ಅಲ್‌-ಹಕೀಮ್‌ ಮಸೀದಿಗೆ ಭೇಟಿ
ಅಮೆರಿಕ ಪ್ರವಾಸ ಮುಗಿಸಿದ ಬಳಿಕ ಈಜಿಪ್ಟ್ಗೆ ತೆರಳಲಿರುವ ಪ್ರಧಾನಿ ಮೋದಿ ಅಲ್ಲಿ 11ನೇ ಶತಮಾನದ ಪ್ರಸಿದ್ಧ ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ. ಈ ಮಸೀದಿಯನ್ನು ದಾವೂದಿ ಬೊಹ್ರಾ ಸಮುದಾಯವು ಪುನಶ್ಚೇತನಗೊಳಿಸಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಹೆಲಿಯೊಪೊಲಿಸ್‌ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಭಾರತೀಯ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ಪ್ರಥಮ ವಿಶ್ವ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರು ಈಜಿಪ್ಟ್ ಪರವಾಗಿ ಹೋರಾಡುತ್ತಾ ಪ್ರಾಣ ಸಮರ್ಪಿಸಿದ್ದರು. 1997ರ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್ಗೆ ಭೇಟಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next