Advertisement

ಸೇನೆಗೆ ಸೇತುವೆ ಬಲ ; ಕಾಶ್ಮೀರದ 6 ಸುಸಜ್ಜಿತ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ

03:25 AM Jul 10, 2020 | Hari Prasad |

ಶ್ರೀನಗರ/ಹೊಸದಿಲ್ಲಿ: ಚೀನದ ಸಕಲ ತಂಟೆಗಳ ನಡುವೆಯೇ ಭಾರತ ಗಡಿಯಲ್ಲಿ 6 ಸುಭದ್ರ ಸೇತುವೆಗಳನ್ನು ನಿರ್ಮಿಸಿದೆ.

Advertisement

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ (ಐಬಿ) ಮತ್ತು ನಿಯಂತ್ರಣ ರೇಖೆಗೆ (ಎಲ್‌ಒಸಿ) ಅತ್ಯಂತ ಹತ್ತಿರದ ಸೂಕ್ಷ್ಮ ಗಡಿಪ್ರದೇಶಗಳಲ್ಲಿ ಈ ಸೇತುವೆಗಳು ನಿರ್ಮಾಣವಾಗುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಆಯಕಟ್ಟಿನ ಪ್ರದೇಶಗಳ ಈ ನಿರ್ಣಾಯಕ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ರಾಷ್ಟ್ರಕ್ಕೆ ಸಮರ್ಪಿಸಿದರು.

ಅತ್ಯಂತ ದುರ್ಗಮ ಪ್ರದೇಶಗಳಲ್ಲಿ, ಅತಿ ಕಡಿಮೆ ಸಮಯದಲ್ಲಿ ಸದೃಢ ಸೇತುವೆಗಳನ್ನು ನಿರ್ಮಿಸಿದ ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ (ಬಿಆರ್‌ಒ) ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಎಲ್ಲೆಲ್ಲಿ ಸೇತುವೆ?: ಕಥುವಾ ಜಿಲ್ಲೆಯ ಟಾರ್ನಾ ನಲ್ಲಾದಲ್ಲಿ 2, ಜಮ್ಮು ಜಿಲ್ಲೆಯ ಅಖೂ°ರ್‌- ಪಲ್ಲನ್ವಾಲ ದಲ್ಲಿ 4 ನೂತನ ಸೇತುವೆಗಳು ತಲೆಎತ್ತಿವೆ. 30ರಿಂದ 300 ಮೀಟರ್‌ ವಿಸ್ತಾರ ಹೊಂದಿರುವ ಈ ಸೇತುವೆಗಳನ್ನು 43 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. “ಜಮ್ಮು, ಕಾಶ್ಮೀರದ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಕೇಂದ್ರ ಸರಕಾರ ಯಾವತ್ತೂ ಕೈಬಿಡುವುದಿಲ್ಲ’ ಎಂದು ರಾಜನಾಥ್‌ ಸಿಂಗ್‌ ಇದೇ ವೇಳೆ ಭರವಸೆ ನೀಡಿದರು.

Advertisement

‘ಅತ್ಯಾಧುನಿಕ ತಂತ್ರಜ್ಞಾನ, ಉಪಕರಣಗಳನ್ನು ಬಳಸಿ ಬಿಆರ್‌ಒ ಕಳೆದೆರಡು ವರ್ಷಗಳಲ್ಲಿ ಚಮತ್ಕಾರ ಸೃಷ್ಟಿಸಿದೆ. ಭಾರತದ ಗಡಿಪ್ರದೇಶಗಳಲ್ಲಿ ವಿವಿಧೆಡೆ 4,200 ಕಿ.ಮೀ. ಒಟ್ಟು ದೂರವನ್ನು ತಗ್ಗಿಸಿ, 2,200 ಕಿ.ಮೀ. ದೂರದ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿದೆ’ ಎಂದು ಹೇಳಿದರು.

ಕಾಶ್ಮೀರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸೇನೆಯ ಹೆವಿ ಟ್ರಕ್ಕುಗಳು ತೆರಳಲು ನೂತನ ಸೇತುವೆಗಳು ಅನುಕೂಲ ಮಾಡಿಕೊಟ್ಟಿವೆ. ಪಾಕ್‌ ಜತೆಗೂಡಿ ಪಿತೂರಿ ನಡೆಸುತ್ತಿರುವ ಚೀನಕ್ಕೆ ಭಾರತದ ಸೇತುವೆ ಸಾಹಸ ಭವಿಷ್ಯದಲ್ಲಿ ದೊಡ್ಡ ಹೊಡೆತ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಚೀನ ನಡೆಗೆ ಭಾರತ ಕಟ್ಟೆಚ್ಚರ
ಲಡಾಖ್‌ನ ಎಲ್‌ಎಸಿಯಲ್ಲಿ ಚೀನ ಹಿಂದೆ ಸರಿಯುತ್ತಿರುವುದು ಸಂಘರ್ಷದ ಮುನ್ಸೂಚ ನೆಯೂ ಇದ್ದಿರಬಹುದು. ವಿವಾದಿತ ಗಡಿ ಪ್ರದೇಶಗಳಲ್ಲಿ ಪಿಎಲ್‌ಎ ಸೈನಿಕರು ನಿಷ್ಕ್ರಿಯಗೊಂಡಿರುವ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸುವ ನಿರ್ಣಯವನ್ನು ಭಾರತ ಕೈಗೊಂಡಿದೆ. ಚೀನ ಗಡಿವಿವಾದದ ಸಂಬಂಧ ಕೇಂದ್ರ ಸರಕಾರದ ಮುಂದಿನ ಕ್ರಮಗಳನ್ನು ನಿರ್ಧರಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ನೇತೃತ್ವದಲ್ಲಿ ಬುಧವಾರ ಉನ್ನತ ಕಾರ್ಯತಂತ್ರ ತಂಡ ಸಭೆ ನಡೆಸಿತ್ತು. ಪಿಎಲ್‌ಎ ಪಡೆ ಲಡಾಖ್‌ನ 1,597 ಕಿ.ಮೀ. ಜತೆಗೆ ಅರುಣಾಚಲ ಪ್ರದೇಶದ 1,126 ಕಿ.ಮೀ. ಎಲ್‌ಎಸಿ ಉದ್ದದ ಎಲ್ಲ ಪ್ರದೇಶಗಳಿಂದಲೂ ಹಿಂದೆ ಸರಿಯಬೇಕು ಎಂಬ ಒತ್ತಾಯ ಸಭೆಯಲ್ಲಿ ಪ್ರತಿಧ್ವನಿಸಿತು.

ಡೆಪ್ಸಾಂಗ್‌ ಮೇಲೆ ನಿಗಾ: ಚೀನ ಸೈನ್ಯವು ರಾಕಿ ನುಲ್ಲಾ ವಲಯದ ಡೆಪ್ಸಾಂಗ್‌ ಗಸ್ತು ಪಾಯಿಂಟ್‌ನಲ್ಲಿ ಆಕ್ರಮಣಕಾರಿಯಾಗಿ ವರ್ತಿಸುತ್ತದೆ. 2013 ರಿಂದ ಹಲವು ಬಾರಿ ಚೀನ ಇಂಥ ದುರ್ವರ್ತನೆ ತೋರಿದ್ದು, ಆ ಭಾಗದಲ್ಲಿ ಹೆಚ್ಚು ನಿಗಾ ಇಡುವಂತೆ ಹಲವು ಉನ್ನತಾಧಿಕಾರಿಗಳು ಸೂಚಿಸಿದರು.

ಗೋಗ್ರಾದಲ್ಲೂ ಹಿಂದೆ ಸರಿಯುತ್ತಿರುವ ಚೀನ
ಎಲ್‌ಎಸಿಯ ವಿವಾದಿತ 2 ಗಸ್ತು ಪ್ರದೇಶಗಳಿಂದ ಚೀನ ಕಾಲ್ಕಿತ್ತಾಗಿದೆ. ಈಗ ಗೋಗ್ರಾದ ಪಿಪಿ- 17ಎ ಜಾಗದಿಂದಲೂ ಚೀನ ಹಿಂದೆ ಸರಿಯಲು ಸಿದ್ಧತೆ ನಡೆಸುತ್ತಿದೆ. 1 ಅಥವಾ 2 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪ್ಯಾಂಗಾಂಗ್‌ ಸರೋವರ ಬಳಿಯೂ (ಪಿಪಿ-4) ಪಿಎಲ್‌ಎ ಪಡೆಯ ಚಲನೆಯನ್ನು ಭಾರತ ಗಮನಿಸಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.ಫಿಂಗರ್‌ 4ರ ಪರ್ವತ ಇಳಿಜಾರಿನಲ್ಲಿ ಚೀನ 3 ಸೇನಾ ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಅಲ್ಲಿ ಸೈನಿಕರು ಸಕ್ರಿಯರಾಗಿದ್ದಾರೆ.

ಸೇನೆ ವಾಪಸ್‌, ಬಾಯ್ಬಿಟ್ಟ ಚೀನ: ಎಲ್‌ಎಸಿಯ ವಿವಾದಿತ ಪ್ರದೇಶಗಳಿಂದ ಪಿಎಲ್‌ಎ ಹಿಂದೆ ಸರಿಯುತ್ತಿರುವ ಬಗ್ಗೆ ಇದೇ ಮೊದಲ ಬಾರಿಗೆ ಚೀನ ಒಪ್ಪಿಕೊಂಡಿದೆ. “ಎಲ್‌ಎಸಿಯ ಉದ್ದಕ್ಕೂ ಗಾಲ್ವಾನ್‌ ಕಣಿವೆ ಹಾಗೂ ಇತರೆ ಪ್ರದೇಶಗಳಲ್ಲಿ ಸೇನೆ ವಿಲೇವಾರಿಗೆ ಚೀನ- ಭಾರತ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಗಾಲ್ವಾನ್‌ ಕಣಿವೆ ನಂತರ ಹಾಟ್‌ಸ್ಪ್ರಿಂಗ್ಸ್‌ ನಲ್ಲೂ ಚೀನ ತಾತ್ಕಾಲಿಕ ಸೇನಾ ರಚನೆಗಳನ್ನು ತೆಗೆದುಹಾಕಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಜಾವೋ ಲಿಜಿಯಾನ್‌ ಸ್ಪಷ್ಟಪಡಿಸಿದ್ದಾರೆ.

ವಿಭಜನೆಯತ್ತ ನೇಪಾಲ ಆಡಳಿತ ಪಕ್ಷ?
ಆಡಳಿತಾರೂಢ ನೇಪಾಲ ಕಮ್ಯೂನಿಸ್ಟ್‌ ಪಕ್ಷ ವಿಭಜನೆಯ ದಾರಿಯಲ್ಲಿದೆ. ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪ್ರಚಂಡ ಮತ್ತು ಪ್ರಧಾನಿ ಕೆ.ಪಿ.ಒಲಿ ನಡುವೆ ಹಲವು ದಿನಗಳಿಂದ ನಡೆಯುತ್ತಿರುವ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಚೀನ ಜತೆಗೆ ಹೆಚ್ಚಿನ ಸಖ್ಯ, ಮ್ಯಾಪ್‌ ವಿವಾದ ಸೇರಿದಂತೆ ಹಲವು ವಿಚಾರಗಳು ಆಡಳಿತ ಪಕ್ಷದಲ್ಲಿ ಭಿನ್ನಾಭಿಪ್ರಾಯ ತಂದಿಟ್ಟಿದೆ. ಇದೇ ವೇಳೆ ಪ್ರಧಾನಿ ಹುದ್ದೆಯಲ್ಲಿ ಓಲಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ಶುಕ್ರವಾರದ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ. ಹಲವು ಬಾರಿ ಈ ಸಭೆ ಮುಂದೂಡಲ್ಪಟ್ಟಿತ್ತು.

ತುರ್ತು ಪರಿಸ್ಥಿತಿಗೆ ಒಲವು:
ಅಲುಗಾಡುತ್ತಿರುವ ಪ್ರಧಾನಿ ಕುರ್ಚಿಗೆ ತುರ್ತು ಪರಿಸ್ಥಿತಿ ಆಧಾರ ಮಾಡಿಕೊಳ್ಳಲು ನೇಪಾಲ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮುಂದಾಗಿದ್ದಾರೆ. ನೇಪಾಲದಲ್ಲಿ ಕೋವಿಡ್ 19 ಸೋಂಕು ತೀವ್ರವಾಗಿ ಹಬ್ಬುತ್ತಿರುವುದರಿಂದ ಓಲಿ ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸುವ ಯೋಚನೆಯಲ್ಲಿದ್ದಾರೆ. ರಾಷ್ಟ್ರಾಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಜತೆ ಈ ಬಗ್ಗೆ ಓಲಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ, ರಾಷ್ಟ್ರಾಧ್ಯಕ್ಷೆ ಮಾತ್ರ ಓಲಿ ನಿರ್ಣಯದ ಬಗ್ಗೆ ಸಹಮತ ಹೊಂದಿಲ್ಲ ಎನ್ನಲಾಗಿದೆ.

ಸೇತುವೆಗಳಿಂದ ಸೇನೆಗೇನು ಲಾಭ?
– ಗಡಿಭಾಗದ ಅತ್ಯಂತ ಸೂಕ್ಷ್ಮ ಪ್ರದೇಶಗಳಿಗೆ ಆಧಾರ.
– ಸೇನೆ ಸಂಚಾರಕ್ಕೆ ಭಾರೀ ಅನುಕೂಲ.
– ಶ್ರೀನಗರದಿಂದ ಕಾಶ್ಮೀರದ ಇತರೆ ಭಾಗಗಳಿಗೆ ಯುದ್ಧೋಪಕರಣ ಒಯ್ಯಲು ಸುಲಭವಾಗಲಿದೆ.
– ಗಡಿ ಪ್ರದೇಶಗಳ ವ್ಯಾಪಾರ ಚಟುವಟಿಕೆಗೆ ಅನುಕೂಲ

ಆರು ಸೇತುವೆಗಳು
ಟಾರ್ನಾ 1- 160 ಮೀ.
ಟಾರ್ನಾ 2- 300 ಮೀ.
ಪಲ್ವಾನ್‌- 91 ಮೀ.
ಘೋಡವಾಲಾ- 151 ಮೀ.
ಪಹಡಿವಾಲಾ- 61 ಮೀ.
ಪನ್ಯಾಲಿ- 31 ಮೀ.

ಲಡಾಖ್‌ ಗಡಿಯಲ್ಲಿ ಚೀನದ ದುರಾಕ್ರಮಣ ಗಳಿಗೆ ಭಾರತ ಸರಿಯಾದ ಪಾಠ ಕಲಿಸಿದೆ. ಚೀನ ಪ್ರಚೋದಿಸುವ ಗುಣವನ್ನು ಹೊಂದಿದೆ. ಈ ಬೆದರಿಕೆಯ ಕ್ರಮವನ್ನು ಚೀನ ಮುಂದುವರಿಸಕೂಡದು ಹಾಗೂ ಜಗತ್ತೂ ಇದಕ್ಕೆ ಅನುಮತಿಸಬಾರದು.
– ಮೈಕ್‌ ಪೊಂಪ್ಯೋ, ಅಮೆರಿಕ ವಿದೇಶಾಂಗ ಸಚಿವ

ಆಕ್ರಮಣ ಮತ್ತು ವಿಸ್ತರಣೆ ಸ್ವಭಾವ ಎನ್ನುವುದು 5 ಸಾವಿರ ವರ್ಷಗಳ ಚರಿತ್ರೆಯ ಚೀನೀಯರ ಜೀನ್‌ನಲ್ಲೇ ಇಲ್ಲ. ಚೀನ ಮತ್ತೂಂದು ಅಮೆರಿಕ ಆಗಲು ಸಾಧ್ಯವಿಲ್ಲ ಮತ್ತು ಆಗುವುದೂ ಇಲ್ಲ.
– ವಾಂಗ್‌ ಇ, ಚೀನ ವಿದೇಶಾಂಗ ಇಲಾಖೆ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next