Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್ ಮುಗಿಸಲೇಬೇಕು. ಪ್ರಾದೇಶಿಕ, ರೈತರ ಪರ, ಜಾತ್ಯತೀತ ನಿಲುವಿನ ಪ್ರಾದೇಶಿಕ ಪಕ್ಷ ಇರಲೇಬಾರದು ಎಂಬುದು ಗುರಿಯಾಗಿತ್ತು ಎಂದರು. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಸಮುದಾಯದವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಆದರೆ ಇಂತಹ ಕುತಂತ್ರದ ರಾಜಕಾರಣವನ್ನು ಮೆಟ್ಟಿ ನಿಲ್ಲುವ ಶಕ್ತಿ ಜೆಡಿಎಸ್‌ಗಿದೆ. ಈ ಬಾರಿಯ ಉಪ ಚುನಾವಣೆ ಹಣ ಮತ್ತು ಅಧಿಕಾರದ ಬಲದ ಮೇಲೆ ನಡೆದಿದೆ ಎಂದು ಆರೋಪಿಸಿದರು.
Related Articles
Advertisement
ಉಪ ಚುನಾವಣೆಗೆ ಬಿಜೆಪಿ 750 ಕೋಟಿ ರೂ. ವೆಚ್ಚಹಾಸನ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯಿತು. ಒಂದೊಂದು ಕ್ಷೇತ್ರಕ್ಕೂ ಬಿಜೆಪಿ 50 ರಿಂದ 60 ಕೋಟಿ ರೂ. ಖರ್ಚು ಮಾಡಿದ್ದು, ಸುಮಾರು 750 ಕೋಟಿ ರೂ.ಗಳನ್ನು ಬಿಜೆಪಿ ಚುನಾವಣೆಗೆ ಖರ್ಚು ಮಾಡಿದೆ. ಅಧಿಕಾರಿಗಳ ಮೂಲಕ ವಸೂಲಿ ಮಾಡಿ ಇಷ್ಟು ಹಣವನ್ನು ವೆಚ್ಚ ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ದೂರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ 750 ಕೋಟಿ ರೂ. ಖರ್ಚು ಮಾಡಿರುವ ಬಿಜೆಪಿಯವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಿಗೂ 50 ಕೋಟಿ ರೂ.ಗಳಂತೆ ಎಷ್ಟು ಸಾವಿರ ಕೋಟಿ ರೂ. ಖರ್ಚು ಮಾಡುತ್ತಾರೋ ನೋಡೋಣ ಎಂದರು. ಚುನಾವಣಾ ಆಯೋಗದ ನಿರ್ಲಕ್ಷ್ಯ: ಕೆ.ಆರ್.ಪೇಟೆಯಲ್ಲಿ ಉಪ ಮುಖ್ಯಮಂತ್ರಿಯೇ ಖುದ್ದು ಹಾಜರಿದ್ದು ಹಣ ಹಂಚಿಸಿದ್ದಾರೆ. ಪೊಲೀಸ್ ವಾಹನದಲ್ಲಿಯೇ ಹಣ ರವಾನೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿಲ್ಲ. ಈಗ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿ ಉಳಿದಿಲ್ಲ. ಅಧಿಕಾರಿಗಳೇ ಆಯೋಗವನ್ನು ನಿಯಂತ್ರಿಸುವ ಸ್ಥಿತಿಯಿದೆ. ಟಿ.ಎನ್.ಶೇಷನ್ ಅವರು ಚುನಾವಣಾ ಆಯೋಗದ ಆಯುಕ್ತರಾಗಿದ್ದಾಗ ಚುನಾವಣಾ ಆಯೋಗಕ್ಕೆ ಇದ್ದ ಶಕ್ತಿ ಈಗ ಇಲ್ಲ ಎಂದೂ ವಿಷಾದಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆ.ಆರ್.ಪೇಟೆ ಕ್ಷೇತ್ರಕ್ಕೆ 1000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಹಣ ಕೊಡುವೆ. ಸುವರ್ಣ ಕರ್ನಾಟಕ ನಿರ್ಮಾಣ ಮಾಡುವೆ ಎಂದು ಭರವಸೆ ನೀಡಿದ್ದಾರೆ. ಅವರು ಸುವರ್ಣ ಕರ್ನಾಟಕ ನಿರ್ಮಾಣ ಮಾಡುವುದಿದ್ದರೆ ಸಹಕಾರ ಕೊಡುತ್ತೇವೆ. ನಾವೇಕೆ ಅಡ್ಡಿಯಾಗೋಣ ಎಂದರು. ನಾರಾಯಣಗೌಡ ವಿರುದ್ಧ ವಾಗ್ಧಾಳಿ: ಅಯೋಗ್ಯ ಸರ್ಕಾರವನ್ನು ಉರುಳಿಸಿ ಯೋಗ್ಯ ಸರ್ಕಾರ ತರಲು ಬಿಜೆಪಿ ಸೇರಿದೆ ಎಂದು ಈಗ ಹೇಳುತ್ತಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡರನ್ನು ಎಂಎಲ್‌ಎ ಮಾಡಿ ಮುಂಬೈನಲ್ಲಿ ವ್ಯಾಪಾರ ಮಾಡಲು ಬಿಟ್ಟಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅಯೋಗ್ಯ ಎಂದು ಗೊತ್ತಿರಲಿಲ್ಲವೇ ಎಂದು ರೇವಣ್ಣ ಅವರು ಹರಿಹಾಯ್ದರು. ಮೂಲೆಯಲ್ಲಿ ಬಿದ್ದಿದ್ದ ನಾರಾಯಣಗೌಡರನ್ನು ಕರೆ ತಂದು ಎಂಎಲ್‌ಎ ಮಾಡಿದ್ದಕ್ಕಾಗಿ ಈಗ ನಾವು ಪಶ್ಚಾತ್ತಾಪ ಪಡುತ್ತಿದ್ದೇವೆ. ರೈತರ 46 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿದ ಮತ್ತು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಮಂಜೂರು ಮಾಡಿ ಹಳ್ಳಿಯ ಮಕ್ಕಳೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ ಎಚ್.ಡಿ.ಕುಮಾರಸ್ವಾಮಿ ಯೋಗ್ಯನೋ ಅಯೋಗ್ಯನೋ ಎಂಬುದನ್ನು ರಾಜ್ಯದ ಜನರೇ ತೀರ್ಮಾನ ಮಾಡಲಿ ಎಂದರು. 4 ತಿಂಗಳಲ್ಲಿ ಹಾಸನಕ್ಕೆ ಎಷ್ಟು ಮಂಜೂರಾಗಿದೆ?
ಹಾಸನ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಾಸನ ನಗರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಎರಡು ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರು. ನಾವು (ಜೆಡಿಎಸ್) ಅಧಿಕಾರದಿಂದ ಇಳಿದ ನಂತರ ಕಳೆದ 4 ತಿಂಗಳಲ್ಲಿ ಹಾಸನ ನಗರ ಮತ್ತು ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಹಣ ಮಂಜೂರಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಅವರ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು. ಪ್ರತಿಕ್ರಿಯಿಸಿದ ರೇವಣ್ಣ ಅವರು, ನನ್ನ ಬಗ್ಗೆ ಟೀಕೆ ಮಾಡಲು ಅವನಾರು ? ಅವನ ಟೀಕೆಗಳಿಗೆಲ್ಲ ಪ್ರತಿಕ್ರಿಯಿಸಿದರೆ ನನ್ನಂಥ ದಡ್ಡ ಇನ್ಯಾರೂ ಇರಲ್ಲ ಎಂದರು. ಹಾಸನದ ರಿಂಗ್ ರಸ್ತೆಯ ಉಳಿದ ಕಾಮಗಾರಿಗೆ ನಾನು ಉಸ್ತುವಾರಿ ಸಚಿವನಾಗಿದ್ದಾಗಲೇ 5 ಕೋಟಿ ರೂ. ಮಂಜೂರು ಮಾಡಿದ್ದೆ. ರೈತರು ರಸ್ತೆ ನಿರ್ಮಾಣಕ್ಕೆ ಉಚಿತವಾಗಿ ಭೂಮಿ ನೀಡುವುದಾಗಿ ಹೇಳಿದ್ದರು. ನಾನು ಮಂಜೂರು ಮಾಡಿಸಿದ್ದ ಹಣ ಈಗಲೂ ಖರ್ಚಾಗಿಲ್ಲ. ಹಾಸನದ ಹೊರ ವರ್ತುಲ ರಸ್ತೆಯ 200 ಕೋಟಿ ರೂ. ಕಾಮಗಾರಿಗೆ ಮಂಜೂರಾತಿ ಕೊಡಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ ನಂತರವೂ ಯಡಿಯೂರಪ್ಪ ಸರ್ಕಾರ ಬಂದ ನಂತರ ಕಾಮಗಾರಿ ತಡೆ ಹಿಡಿಸಿದ್ದ ಶಾಸಕ ಪ್ರೀತಂಗೌಡ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿಕೊಂಡ ನಂತರ ಮತ್ತೆ ಕಾಮಗಾರಿ ಮುಂದುವರಿಸಲು ಅವಕಾಶ ನೀಡಿ ದ್ದಾರೆ. ವರ್ತುಲ ರಸ್ತೆಗೆ ನಾನು ಹಣ ಮಂಜೂರು ಮಾಡಿಸಿಲ್ಲ ಎಂಬುದನ್ನು ದಾಖಲೆ ಸಹಿತ ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತನಾಗುವೆ ಎಂದು ಸವಾಲು ಹಾಕಿದರು. ಹಾಸನದ ಚನ್ನಪಟ್ಟಣ ಕೆರೆ ಸೌಂದಯೀಕರಣ ಯೋಜನೆಗೆ 146 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಆದರೆ ಈಗ ಆ ಅನುದಾನವನ್ನು ಹಾಸನದ ಸುತ್ತಮುತ್ತಲಿನ ಎಲ್ಲ ಕೆರೆಗಳಿಗೂ ಹಂಚುತ್ತಾನಂತಾ ? ನಾನು ಹಂಚಲು ಬಿಡ್ತೀನಾ ? ಇವನ್ಯಾರೂ ಕೇಳ್ತಾರೆ ? ಆ ಯೋಜನೆ ಅನುಷ್ಠಾನಕ್ಕೆ ಎಂಎಲ್‌ಎ ಕೈಲಿ ಆಗಲ್ಲ. ಮುಂದೆ ನಾನೇ ಅಧಿಕಾರಕ್ಕೆ ಬಂದು ಅನುಷ್ಠಾನ ಮಾಡ್ತೀನಿ ಎಂದರು. ಹಾಸನದ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನೂ ನಾನು ಬಂದ ಮೇಲೆ ಆರಂಭ ಮಾಡಿದೆ. ಈಗ ಆ ಕಾಮಗಾರಿ ನಿಂತಿದೆ. ಬಹುಶಃ ಅದನ್ನೂ ನಾನೇ ಅಧಿಕಾರಕ್ಕೆ ಬಂದು ಪೂರ್ಣಗೊಳಿಸಬೇಕು ಎಂದರು. ಹಾಸನದ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೂ ಹಣ ಮಂಜೂರು ಮಾಡಿಸಿದ್ದೆನೆ, ಅವುಗಳ ಕಾಮಗಾರಿ ಪೂರ್ಣವಾಗುವಂತೆ ನೋಡಿಕೊಳ್ಳಲಿ. ಹಾಸನ ತಾಲೂಕು ಸೋಮನಹಳ್ಳಿ ಕಾವಲಿನಲ್ಲಿ ತೋಟಗಾರಿಕೆ ಕಾಲೇಜು ಮಂಜೂರಾತಿಗೆ 63 ಕೋಟಿ ರೂ. ಮಂಜೂರಾತಿ ಮಾಡಿಸಿದ್ದೇನೆ. ಅದರಲ್ಲಿ ಕಮೀಷನ್ ಬಂದಿಲ್ಲ ಎಂದು ಹಾಸನದ ಶಾಸಕ ತಡೆ ಹಿಡಿಸಿದ್ದಾರೆ ಎಂದೂ ರೇವಣ್ಣ ಅವರು ಆರೋಪಿಸಿದರು. 2023ರಲ್ಲಿ ಸ್ವಂತ ಬಲದ ಮೇಲೆ ಅಧಿಕಾರ: 2023 ರ ವಿಧಾನಸಭಾ ಚುನಾವಣೆಯ ವೇಳೆಗೆ ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಪಕ್ಷ ಸಂಘಟಿಸಲು ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ಮುಖಂಡರು ಮಂಗಳವಾರ ಚರ್ಚೆ ನಡೆಸಿದ್ದಾರೆ. ಅಷ್ಟರ ವೇಳೆಗೆ ಈ ಎರಡು ರಾಷ್ಟ್ರೀಯ ಪಕ್ಷಗಳೂ ಬೇಡ ಎಂಬ ಮನಸ್ಥಿತಿಗೆ ರಾಜ್ಯದ ಮತದಾರರೇ ಬರಲಿದ್ದಾರೆ ಎಂದು ರೇವಣ್ಣ ಹೇಳಿದರು. ಜೆಡಿಎಸ್‌ನಲ್ಲಿ ಸಂಘಟನೆ ಹಾಗೂ ನಾಯಕರ ಕೊರತೆಯಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನವರಂತೆ ಬಣ್ಣ ಕಟ್ಟಿ ಮಾತನಾಡುವವರು ನಮ್ಮ ಪಕ್ಷದಲ್ಲಿಲ್ಲ.
-ಎಚ್.ಡಿ.ರೇವಣ್ಣ , ಜೆಡಿಎಸ್ ಮುಖಂಡ