ಬೆಂಗಳೂರು: ಈ ಸೋಲು ಶಾಶ್ವತ ಅಲ್ಲ, ತಾತ್ಕಾಲಿಕ. ಧೃತಿಗೆಡದೆ ಪಕ್ಷವನ್ನು ಮರಳಿ ಕಟ್ಟೋಣ. ನಿಮ್ಮ ಜತೆ ನಾವಿದ್ದೇವೆ, ನಾವಿಬ್ಬರೂ ಹಗಲಿರುಳು ನಿಮ್ಮೊಟ್ಟಿಗೆ ಶ್ರಮಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧೈರ್ಯ ತುಂಬಿದರು.
ವಿಧಾನಸಭೆ ಫಲಿತಾಂಶದ ಅನಂತರ ಪಕ್ಷದ ಸಂಘಟನೆಯ ಕಡೆ ಗಮನ ನೀಡಿರುವ ಇಬ್ಬರೂ ನಾಯಕರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳ ಮುಖಂಡರ ಜತೆ ಆತ್ಮಾವಲೋಕನ ಸಭೆಗಳನ್ನು ನಡೆಸಿದರು. ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಒಂದೊಂದು ಜಿಲ್ಲೆಯ ಮುಖಂಡರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಅಗತ್ಯ ಮಾರ್ಗದರ್ಶನ ಮಾಡಿದರು.
ಸಭೆಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡರು, ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಜತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯೂ ಬರುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆಯೂ ನಡೆಯಲಿದೆ. ನಮ್ಮ ಗುರಿ ಈ ಚುನಾವಣೆಗಳೇ ಆಗಿರಬೇಕು. ಇದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಮಾಡಬೇಕು ಹಾಗೂ ಜನರ ಜತೆ ಇದ್ದು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಸಮಿತಿಗಳು ಬದ್ಧತೆಯಿಂದ ದುಡಿಯಬೇಕು ಎಂದು ಕರೆ ಕೊಟ್ಟರು.
ಈ ಸೋಲು ದೊಡ್ಡ ಗೆಲುವಿಗೆ ನಾಂದಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿದೆ ನಿಜ, ಆದರೆ; ಈ ಸೋಲು ಮುಂದೆ ದೊಡ್ಡ ಗೆಲುವಿಗೆ ನಾಂದಿ ಆಗಲಿದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಹೇಳಿ ಜನರಿಗೆ ಯಾಮಾರಿಸುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಜನರ ಜತೆ ಪ್ರಾಮಾಣಿಕವಾಗಿ ನಿಂತರೆ ಅವರೇ ನಮ್ಮ ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂದರು.
Related Articles
“ಆರ್ಥಿಕ ಜ್ಞಾನಿ”ಗೆ ಗ್ಯಾರಂಟಿಗಳ ಜಾರಿ ಹೇಗೆಂದು ಗೊತ್ತಿಲ್ಲವೇ?
ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಓಡಾಡಿ ಅಧಿಕಾರಕ್ಕೆ ಬಂದವರು, ಇವತ್ತು ಜನರನ್ನು ವಿದ್ಯುತ್ ದುರ್ಬಳಕೆ ಮಾಡಿಕೊಳ್ಳಲು ವಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಎಚ್..ಡಿ. ಕುಮಾರಸ್ವಾಮಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ರಾಜ್ಯದ ಜನಕ್ಕೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಟ್ಟಿದ್ದೀರಿ. ಸುಳ್ಳು ಹೇಳಿ ಮತ ಪಡೆದಿರಿ. ಈಗ ನಿಮಗೆ ಅದರ ಸಾಧಕ-ಬಾಧಕ ಅರ್ಥ ಆಗ್ತಾ ಇದೆ. ಮೊದಲೇ ಈ ಬಗ್ಗೆ ಯೋಚನೆ ಮಾಡಿರಲಿಲ್ಲವಾ? ಪರಿಜ್ಞಾನ ಇರಲಿಲ್ಲವಾ? ಈಗ ಷರತ್ತು ಎನ್ನುತ್ತಿದ್ದಾರೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಎಚ್ಡಿಕೆ ತೀವ್ರ ವಾಗ್ಧಾಳಿ ನಡೆಸಿದರು.
ಬಿಜೆಪಿ ಪ್ರತಿಭಟನೆ ಸೋಜಿಗ
ವಿದ್ಯುತ್ ದರ ಏರಿಕೆಗೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಸೋಮವಾರ ಧರಣಿ ಮಾಡಿದ್ಧಾರೆ. ಇವರು ಯಾವ ಕಾರಣಕ್ಕಾಗಿ ಧರಣಿ ಪ್ರತಿಭಟನೆ ಮಾಡಿದ್ಧಾರೆ ಎನ್ನುವುದೇ ಸೋಜಿಗ. ಬಿಜೆಪಿ ಸರಕಾರದ ಕಾಲದಲ್ಲಿಯೇ ವಿದ್ಯುತ್ ದರ ಹೆಚ್ಚಳಕ್ಕೆ ಅಷ್ಟು ಎಂದಿದ್ದು. ಇವತ್ತು ನೋಡಿದರೆ ಪ್ರತಿಭಟನೆ ಅಂತ ಕಣ್ಣೊರೆಸುವ ನಾಟಕ ಆಡುತ್ತಿದ್ಧಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರು ಸ್ನೇಹಕ್ಕೂ ಸಿದ್ಧ, ಯುದ್ಧಕ್ಕೂ ಸಿದ್ಧ ಅಂದಿದ್ದಾರೆ. ನಾವು ಇಲ್ಲಿ ಕೂತಿರೋದು ಸ್ನೇಹ ಮಾಡೋಕ್ಕಲ್ಲ. ಜನರಿಗೆ ಕಷ್ಟ ಬಂದರೆ ಯುದ್ಧ ಮಾಡುವುದಕ್ಕೆ ಹಿಂಜರಿಯುವುದಿಲ್ಲ. ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ